ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಿದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯುವಂತೆ ಕೋರಿದ್ದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ 2 ನೇ ತಿದ್ದುಪಡಿಯ ಮೂಲಕ ಈ ಪದಗಳನ್ನು ಸಂವಿಧಾನ ಪೀಠಿಕೆಗೆ ಸೇರಿಸಲಾಗಿತ್ತು ಎಂದು ಅರ್ಜಿಗಳು ಆರೋಪಿಸಿದ್ದವು.
ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ಪೀಠಿಕೆಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೇಳಿದೆ.
ರಿಟ್ ಅರ್ಜಿಗಳ ಕುರಿತು ಹೆಚ್ಚು ಚರ್ಚೆ ನಡೆಸಿ ತೀರ್ಪು ನೀಡುವ ಅಗತ್ಯವಿಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದ್ದು ಅದು ಪೀಠಿಕೆಗೂ ಅನ್ವಯಿಸುತ್ತದೆ. ಇಷ್ಟು ವರ್ಷಗಳ ಬಳಿಕ ಪ್ರಕ್ರಿಯೆಯನ್ನು ರದ್ದುಪಡಿಸಲಾಗದು ಎಂದು ನಾವು ವಿವರಿಸಿದ್ದೇವೆ. ಪ್ರಕರಣದಲ್ಲಿ ಸವಾಲಿಗೆ ಒಳಪಟ್ಟಿರದ ಸಂವಿಧಾನದ 368ನೇ ವಿಧಿಯಡಿ ಸಂವಿಧಾನವನ್ನು ಅಳವಡಿಸಿಕೊಂಡ ದಿನಾಂಕವು ಅದರ ಅಧಿಕಾರವನ್ನು ಮೊಟಕುಗೊಳಿಸದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಭಾರತೀಯ ಸನ್ನಿವೇಶದಲ್ಲಿ ಸಮಾಜವಾದ ಮತ್ತು ಜಾತ್ಯತೀತತೆಯ ಅರ್ಥವೇನು ಮತ್ತು ಅದರ ಬಗ್ಗೆ ಸರ್ಕಾರ ಹೇಗೆ ನೀತಿ ನಿರೂಪಣೆ ಇರಬೇಕು ಎಂಬುದರ ಬಗ್ಗೆ ತಾನು ಗಮನಸೆಳೆದಿರುವುದಾಗಿ ಪೀಠ ಹೇಳಿದೆ.
ಮಾಜಿ ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ ಹಾಗೂ ಬಲರಾಮ್ ಸಿಂಗ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ನವೆಂಬರ್ 22 ರಂದು ತೀರ್ಪು ಕಾಯ್ದಿರಿಸಿದ್ದ ಪೀಠ, ಜಾತ್ಯತೀತತೆ ಎಂಬುದು ಸಂವಿಧಾನದ ಮೂಲ ರಚನೆಯ ಭಾಗವಾಗಿದ್ದು 42ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೂ ಪರಿಶೀಲಿಸಿತ್ತು ಎಂದು ನೆನಪಿಸಿತ್ತು.
ಜಾತ್ಯತೀತತೆಯು ಸಂವಿಧಾನದ ಪ್ರಮುಖ ಲಕ್ಷಣವಾಗಿ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಪಶ್ಚಿಮದ ಮಸೂರದಿಂದ ನೋಡುವ ಅಗತ್ಯವಿಲ್ಲ ಎಂದು ಕಳೆದ ತಿಂಗಳು ಅದು ಹೇಳಿತ್ತು.
ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಅವರು ಈ ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಕೀಲ ಶ್ರೀರಾಮ್ ಪರಾಕ್ಕಟ್ ಮೂಲಕ ಬಿನೋಯ್ ಮನವಿ ಸಲ್ಲಿಸಿದ್ದರು.