ನವದೆಹಲಿ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸಮಾಜದಲ್ಲಿ ಒಡಕುಗಳನ್ನು ಸೃಷ್ಟಿಸುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಬೇಕೆಂದು ವಯನಾಡ್ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, “ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಅಧಿಕಾರದಲ್ಲಿರುವವರೇ ತಾರತಮ್ಯ, ದಬ್ಬಾಳಿಕೆ ಹಾಗೂ ಸಮಾಜ ವಿಭಜನೆಗೆ ಯತ್ನಿಸುತ್ತಿದ್ದಾರೆ. ಇಂತಹ ನಡುವಳಿಕೆ ಜನರ ಅಥವಾ ದೇಶದ ಹಿತಾಸಕ್ತಿಗೆ ಮಾರಕವಾಗುತ್ತದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಅರಿತು ನ್ಯಾಯವನ್ನು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಎರಡೂ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ವರ್ತಿಸಿರುವುದು ಸರ್ಕಾರವೇ ಶಾಂತಿಯುತ ವಾತಾವರಣವನ್ನು ಹಾಳು ಮಾಡಿರುವುದನ್ನು ತೋರಿಸುತ್ತದೆ. ರಾಜ್ಯ ಸರ್ಕಾರದ ವರ್ತನೆ ತುಂಬಾ ದುರದೃಷ್ಟಕರ.ಎಲ್ಲ ಸಂದರ್ಭಗಳಲ್ಲೂ ಶಾಂತಿ ಕಾಪಾಡಬೇಕು” ಎಂದು ಯುಪಿ ರಾಜ್ಯದ ಜನತೆಗೆ ಪ್ರಿಯಾಂಕಾ ಮನವಿ ಮಾಡಿದ್ದಾರೆ.