ನವದೆಹಲಿ: ಕೇರಳದ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 4.1 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದು, ಲೋಕಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.
ವಯನಾಡ್ ಜನತೆ ತೋರಿರುವ ಗೌರವ ಮತ್ತು ಅಪಾರ ಪ್ರೀತಿಗೆ ಪ್ರಿಯಾಂಕಾ ಗಾಂಧಿ ಧನ್ಯವಾದ ಸಲ್ಲಿಸಿದ್ದು, ಈ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ನನ್ನ ಆತ್ಮೀಯ ವಯನಾಡ್ ಸಹೋದರ ಮತ್ತು ಸಹೋದರಿಯರೇ, ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆಯಿಂದ ಭಾವುಕಳಾಗಿದ್ದೇನೆ. ಮುಂದಿನ ದಿನಗಳಲ್ಲಿ ಈ ವಿಜಯವು ನಿಮ್ಮದೇ ವಿಜಯ ಎಂದು ನಿಮಗನ್ನಿಸುವಂತೆ ಖಾತರಿ ಪಡಿಸುತ್ತೇನೆ. ನಿಮ್ಮ ಕನಸು ಈಡೇರಿಸಲು, ಹಕ್ಕುಗಳ ಸಾಕಾರಕ್ಕಾಗಿ ಹೋರಾಡಲಿದ್ದೇನೆ. ನಿಮ್ಮವರೇ ಆಗಿ ನಿಮಗಾಗಿ ಹೋರಾಟ ಮಾಡುತ್ತಾರೆ ಎಂದನ್ನಿಸುವಂತೆ ಮಾಡುತ್ತೇನೆ” ಎಂದು ಹೇಳಿದ್ದಾರೆ.
“ನನ್ನ ಮಾರ್ಗದರ್ಶಕರಾಗಿ ಹಾಗೂ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದ ರಾಹುಲ್‌ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯುಡಿಎಫ್‌ನ ನಾಯಕರು, ಪ್ರಚಾರದಲ್ಲಿ ಅವಿರತ ತೊಡಗಿದ್ದ ಎಲ್ಲ ಕಾರ್ಯಕರ್ತರು, ತಾಯಿ ಹಾಗೂ ಪತಿ ರಾಬರ್ಟ್ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರು ನೀಡಿದ ಸಹಕಾರ, ಬೆಂಬಲಕ್ಕಾಗಿ ಕೃತಜ್ಞತೆಗಳು” ಎಂದು ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಬರೇಲಿ, ವಯನಾಡ್ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ರಾಹುಲ್‌ಗಾಂಧಿ ಬಳಿಕ ವಯನಾಡ್ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಕ್ಷೇತ್ರದಿಂದ ಪ್ರಿಯಾಂಕಾ ಅವರು 4,10,931 ಮತಗಳಿಂದ ಗೆಲುವು ಸಾಧಿಸಿದರು.
ಪ್ರಿಯಾಂಕಾ ಅವರು 6,22,338 ಮತ ಪಡೆದರೆ, ಸಮೀಪದ ಅಭ್ಯರ್ಥಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ 2,11,407, ಎನ್‌ಡಿಎಯ ನವ್ಯಾ ಹರಿದಾಸ್ 1,09,939 ಮತ ಪಡೆದಿದ್ದಾರೆ.