Saturday, April 19, 2025

ಪ್ರಭಾವಿಗಳು ಕಬಳಿಸಿದ 29 ಸಾವಿರ ಎಕರೆ ವಕ್ಫ್ ಆಸ್ತಿ ವಶಪಡಿಸಿಕೊಳ್ಳಿ: ಅನ್ವ‌ರ್ ಮಾಣಿಪ್ಪಾಡಿ

by eesamachara
0 comment

ಮಂಗಳೂರು: ವಕ್ಫ್ ಮಂಡಳಿಗೆ ಸೇರಿರುವ 29 ಸಾವಿರ ಎಕರೆಗಳಷ್ಟು ಆಸ್ತಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಭಾವಿಗಳು ಕಬಳಿಸಿದ್ದಾರೆ. ಅದನ್ನು ವಶಪಡಿಸಿಕೊಳ್ಳಿ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವ‌ರ್ ಮಾಣಿಪ್ಪಾಡಿ ಒತ್ತಾಯಿಸಿದ್ದಾರೆ.

ಬುಧವಾರ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “2012ರಲ್ಲಿ ಪ್ರಭಾವಿಗಳು ಕಬಳಿಕೆ ಮಾಡಿಕೊಂಡಿರುವ ವಕ್ಪ್ ಆಸ್ತಿಯ ಮೌಲ್ಯ  ₹ 2.30 ಲಕ್ಷ ಕೋಟಿಗಳಷ್ಟಿತ್ತು. ಈ ಜಮೀನುಗಳಲ್ಲಿ ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನೆಲ್ಲ ನಿರ್ಮಿಸಿದ್ದಾರೆ. ಸರಿಯಾದ ತನಿಖೆ ನಡೆದಿದ್ದೇ ಆದಲ್ಲಿ, ಅನೇಕರು ಜೈಲು ಸೇರಲಿದ್ದಾರೆ. ನಾನು ಆಯೋಗದ ಅಧ್ಯಕ್ಷನಾಗಿದ್ದಾಗ ಸಲ್ಲಿಸಿದ್ದ ವರದಿಯ ಆಧಾರದಲ್ಲಿ, ತನಿಖೆ ನಡೆಸಿ ಪ್ರಭಾವಿಗಳು ಕಬಳಿಕೆ ಮಾಡಿರುವ ಆಸ್ತಿ ವಶಕ್ಕೆ ಪಡೆದರೆ, ಸರ್ಕಾರ ವಕ್ಫ್ ಜಮೀನಿಗೆ ಸಂಬಂಧಿಸಿದ ರೈತರಿಗೆ ನೋಟಿಸ್‌ ನೀಡುವ ಪ್ರಮೇಯವೇ ಉದ್ಭವಿಸದು” ಎಂದು ಹೇಳಿದರು.

“ವಕ್ಫ್ ಆಸ್ತಿ ಕಬಳಿಕೆ ಮಾಡಿರುವ ಪ್ರಭಾವಿಗಳನ್ನು ಶಿಕ್ಷಿಸುವ ಮೂಲಕ ಅಲ್ಪಸಂಖ್ಯಾತರಿಗೆ ನೆರವಾಗುವ ಉತ್ತಮ ಅವಕಾಶವನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಕಳೆದುಕೊಂಡಿದೆ. ನನ್ನ ವರದಿಯ ಆಧಾರದಲ್ಲಿ ಹಳೆಯ ಗೆಜೆಟ್ ಅಧಿಸೂಚನೆಗಳ ಆಧಾರದಲ್ಲಿ ತನಿಖೆ ನಡೆದರೆ ವಕ್ಫ್ ಮಂಡಳಿಯ ನಿಜವಾದ ಆಸ್ತಿ ಎಷ್ಟು? ಕಬಳಿಕೆ ಆಗಿದ್ದೆಷ್ಟು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಎರಡು ಧರ್ಮಗಳ ನಡುವೆ ದ್ವೇಷ ಹುಟ್ಟಿಸುವಂತಹ ಬೆಳವಣಿಗೆಗೆ ಅವಕಾಶವೇ ಇರುವುದಿಲ್ಲ” ಎಂದರು.

“ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಮುಸ್ಲಿಮರ ಪರ ಕಾಳಜಿ ಇದ್ದರೆ, ನನ್ನ ವರದಿ ಆಧರಿಸಿ ಸಮಗ್ರ ತನಿಖೆ ನಡೆಸಲಿ” ಎಂದು ಸವಾಲು ಹಾಕಿದರು

ಪ್ರಮೋದ್ ಮುತಾಲಿಕ್ ಮಾತನಾಡಿ, “ಅನ್ವರ್ ಮಾಣಿಪ್ಪಾಡಿ ವರದಿ ಜಾರಿಯಾದರೆ ಹಿಂದೂಗಳಿಗೆ ಹಾಗೂ ಮುಸ್ಲಿಮರಿಗೂ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಇದೆ. ಬಹಳಷ್ಟು ಅಧ್ಯಯನ ನಡೆಸಿ ಈ ವರದಿ ತಯಾರಿಸಿದ್ದಾರೆ. ವಕ್ಸ್ ಆಸ್ತಿ ಕಬಳಿಸಿರುವ ಪ್ರಭಾವಿಗಳನ್ನು ಸರ್ಕಾರ ಶಿಕ್ಷೆಗೆ ಗುರಿಪಡಿಸಬೇಕು” ಎಂದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios