ಬೆಂಗಳೂರು: “ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿದೆ ಎಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಸುಳ್ಳು ಸುದ್ದಿ ಹರಿಬಿಟ್ಟ ಸಂಬಂಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
“ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರನಗಿರಿ ರೈತ ಚನ್ನಪ್ಪ ಸಿ.ಬಾಳಿಕಾಯಿ (24) ಅಲಿಯಾಸ್ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಕನ್ನಡ ದುನಿಯಾ ಹಾಗೂ ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮಗಳ ಇ-ಪೇಪರ್‌ನಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿತ್ತು. ಇದನ್ನು ಸಂಸದ ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಹಂಚಿಕೊಂಡು ಸರ್ಕಾರದ ವಿರುದ್ಧ ಸುಳ್ಳಾರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯರನ್ನು ಮೊದಲ ಆರೋಪಿಯನ್ನಾಗಿಸಿ, ಕನ್ನಡ ದುನಿಯಾ ಮಾಧ್ಯಮ ಮತ್ತು ಕನ್ನಡ ನ್ಯೂಸ್ ಸಂಪದಾಕರನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳನ್ನಾಗಿಸಿ ಹಾವೇರಿ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಈ ಪ್ರಕರಣಕ್ಕೆ ತಡೆಕೋರಿ ತೇಜಸ್ವಿ ಸೂರ್ಯ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್‌ಗೆ ತಡೆ ನೀಡಿದೆ.
ತೇಜಸ್ವಿ ಸೂರ್ಯ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, “ಇದು ಪೊಲೀಸರು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತವಾದ ದುರುದ್ದೇಶಪೂರಿತ ಮತ್ತು ಕಾನೂನು ಬಾಹಿರ ದೂರು. ಪೊಲೀಸರು ಸ್ಪಷ್ಟನೆ ನೀಡಿದ ಬಳಿಕ ಟ್ವಿಟ್ ಡಿಲೀಟ್ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಭಾರತೀಯ ನಾಗರಿಕ ಸಂಹಿತೆ-2023ರ (ಬಿಎನ್‌ಎಸ್) ಕಲಂ 353 (2) ಅಡಿ ಅಪರಾಧ ಆಗುವುದಿಲ್ಲ. ಅರ್ಜಿದಾರರು ಜವಾಬ್ದಾರಿಯುತ ಸಂಸದರಾಗಿದ್ದು, ಯಾವುದೇ ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಆದ್ದರಿಂದ ಎಫ್‌ಐಆರ್ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಎಫ್‌ಐಆರ್ ಗೆ ಮಧ್ಯಂತರ ತಡೆ ನೀಡಿತು. ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿತು.