ಚೆನ್ನೈ: ವೈದ್ಯರೊಬ್ಬರಿಗೆ ರೋಗಿಯ ಮಗ ಚಾಕುವಿನಿಂದ ಏಳು ಬಾರಿ ಇರಿದಿರುವ ಭೀಕರ ಘಟನೆ ಇಲ್ಲಿನ ಕಲೈನರ್ ಸೆಂಟನರಿ ಸೂಪರ್ ಸ್ಪೆಷಾಲಿಟಿ ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.
ಗಾಯಗೊಂಡ ವೈದ್ಯರನ್ನು ಬಾಲಾಜಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಆಂಕಾಲಾಜಿಸ್ಟ್ ಮತ್ತು ಮೆಡಿಕಲ್ ಆಂಕಾಲಾಜಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಪಿ ವಿಘ್ನೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿಘ್ನೇಶ್ ತಾಯಿ ಕ್ಯಾನ್ಸರ್ ಪೀಡಿತರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿಯ ಚಿಕಿತ್ಸೆಯ ಕುರಿತು ಆರೋಪಿ ವಿಘ್ನೇಶ್ ಮತ್ತು ಡಾ.ಬಾಲಾಜಿ ಮಧ್ಯೆ ಕ್ಯಾನ್ಸರ್ ವಾರ್ಡ್ ನಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವಿಚಾರವಾಗಿ ಸಿಟ್ಟಿಗೆದಿದ್ದ ಆರೋಪಿ ಕೆಲಸದಲ್ಲಿದ್ದ ಡಾ.ಬಾಲಾಜಿ ಅವರಿಗೆ ಚಾಕುವಿನಿಂದ ಕುತ್ತಿಗೆ, ಕಿವಿ, ಎದೆ, ಹಣೆ ಮತ್ತು ಬೆನ್ನು, ತಲೆ ಹಾಗೂ ಹೊಟ್ಟೆ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದಾಗ ಅಲ್ಲಿನ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇರಿತದಿಂದ ವೈದ್ಯರ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಸದ್ಯ ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಘಟನೆಯನ್ನು ತಮಿಳುನಾಡು ಸರ್ಕಾರಿ ವೈದ್ಯರ ಅಸೋಸಿಯೇಷನ್ (ಟಿಎನ್ ಜಿಡಿಎ) ತೀವ್ರವಾಗಿ ಖಂಡಿಸಿದೆ. ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಆರೋಗ್ಯ ವಿಚಾರಿಸಿದ್ದಾರೆ.
ಈ ದಾಳಿಯನ್ನು ಖಂಡಿಸಿರುವ ಸಿಎಂ ಎಂ.ಕೆ. ಸ್ಟಾಲಿನ್, “ಡಾ ಬಾಲಾಜಿ ಮೇಲಿನ ದಾಳಿ ಆಘಾತಕಾರಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ತನಿಖೆಗೆ ಸೂಚಿಸಲಾಗಿದೆ. ಜನರಿಗೆ ಆರೋಗ್ಯ ಸೇವೆ ಒದಗಿಸಲು ವೈದ್ಯರು ಅವಿರತವಾಗಿ ಹೋರಾಡುತ್ತಿದ್ದಾರೆ. ಅವರ ಸುರಕ್ಷತೆ ನಮ್ಮ ಮೊದಲ ಆದ್ಯತೆ” ಎಂದು ಹೇಳಿದ್ದಾರೆ.