ಹಾವೇರಿ: ಲೋಕಾಯುಕ್ತ ಪೊಲೀಸ್ ದಾಳಿ ವೇಳೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಕಾಶಿನಾಥ್ ಭಜಂತ್ರಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಿಟಕಿಯಿಂದ ಹೊರಗೆಸೆದ ಘಟನೆ ಮಂಗಳವಾರ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಹಾವೇರಿಯ ಬಸವೇಶ್ವರ ನಗರದ 1ನೇ ಕ್ರಾಸ್ನಲ್ಲಿರುವ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಕೌಲಾಪುರೆ ನೇತೃತ್ವದ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಲೋಕಾಯುಕ್ತ ಅಧಿಕಾರಿಗಳು ಮನೆ ಕಡೆ ಆಗಮಿಸುತ್ತಿದ್ದನ್ನು ಕಂಡ ಕಾಶಿನಾಥ್ ಭಜಂತ್ರಿ ಗಾಬರಿಗೊಂಡು ಕೊಠಡಿಗೆ ಹೋಗಿ ಸುಮಾರು 9 ಲಕ್ಷ ನಗದನ್ನು ಗಂಟು ಕಟ್ಟಿ ಶೌಚಾಲಯದ ಕಿಟಕಿಯ ಮೂಲಕ ಹೊರಗೆ ಎಸೆದಿದ್ದಾರೆ. 2 ಲಕ್ಷ ನಗದು ಬೆಡ್ ನಲ್ಲಿ ಸುತ್ತಿ ಇಟ್ಟಿರುವುದು ಕಂಡುಬಂದಿದೆ. ಬಳಿಕ ಗಂಟು ಪತ್ತೆ ಮಾಡಿದ ಅಧಿಕಾರಿಗಳು ಒಟ್ಟು ಮನೆಯಲ್ಲಿದ್ದ 14 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಬಂಗಾರ ಸೇರಿದಂತೆ ಹಲವು ಮಹತ್ತರ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.