ಮಂಗಳೂರು: ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ರೈಲ್ವೆ ವಿಭಾಗ ರಚಿಸಿ ಅಭಿವೃದ್ಧಿ ಪಡಿಸಬೇಕು ಎಂದು ಶಾಸಕ ಮಂಜುನಾಥ ಭಂಡಾರಿ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ರೈಲ್ವೆ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆಗಾಗಿ ಮಂಗಳೂರಿಗೆ ಆಗಮಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ನಗರದಲ್ಲಿ ಭೇಟಿ ಮಾಡಿದ ಶಾಸಕ ಮಂಜುನಾಥ ಭಂಡಾರಿ ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿ ವಿಚಾರದ ಬಗ್ಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪಾಲಕ್ಕಾಡ್, ಕೊಂಕಣ, ನೈಋುತ್ಯ ರೈಲ್ವೆ ವಲಯಗಳಿಂದ ಕೂಡಿರುವ ಮಂಗಳೂರಿನ ರೈಲ್ವೆ ಪರಿಸ್ಥಿತಿ ಹೀನಾಯವಾಗಿದ್ದು, ಅಭಿವೃದ್ಧಿಗೆ ಕುಂಠಿತವಾಗಿದೆ. ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗದ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
“ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕು, ಕರ್ನಾಟಕ ಕರಾವಳಿ ಭಾಗದ ರೈಲ್ವೆ ಪ್ರದೇಶಕ್ಕೆ ಪ್ರತ್ಯೇಕ ಮಂಗಳೂರು ವಿಭಾಗವನ್ನು ಸೃಜಿಸಬೇಕು, ಕೊಂಕಣ ರೈಲ್ವೆ ನಿಗಮದ ತೋಕೂರಿನಿಂದ ರೋಹವರೆಗೆ ಹಾಗೂ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಮೈಸೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ಜಂಕ್ಷನ್ವರೆಗೆ ಏಕ ಮಾರ್ಗವಾಗಿದ್ದು, ಇದು ದ್ವಿಪಥವಾಗಿ ವಿದ್ಯುದ್ಧೀಕರಣವಾಗಬೇಕು, ರೈಲ್ವೆ ನಿಲ್ದಾಣಗಳ ಆಧುನೀಕರಣ ಹಾಗೂ ಎಲಿವೇಟರ್‌ಗಳ ವ್ಯವಸ್ಥೆಯನ್ನು ಒದಗಿದಬೇಕು” ಎಂದು ಪತ್ರದಲ್ಲಿ ಕೋರಿದ್ದಾರೆ.
“ಕೊಂಕಣ ರೈಲ್ವೆ ನಿಗಮವು ಸುಮಾರು 5 ಸಾವಿರ ಕೋಟಿ ನಷ್ಟದಲ್ಲಿದೆ. ಜೋಡಿ ಹಳಿ ನಿರ್ಮಾನಕ್ಕೆ ಮಾಡಲು ನಿಗಮದ ಬಳಿ ಹಣವಿಲ್ಲ. ಹೆಚ್ಚುವರಿ ಬೋಗಿಗಳ ಹಾಗೂ ಹೊಸ ಜರ್ಮನ್ ತಂತ್ರಜ್ಞಾನದ ಎಲ್.ಎಚ್.ಬಿ ರೈಲು ಬೋಗಿಗಳ ಖರೀದಿಗೂ ನಿಗಮದ ಬಳಿ ಹಣವಿಲ್ಲ. ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಟಿಕೆಟ್ ದರ ಉಳಿದ ಕಡೆಗಳಿಗಿಂತ ಶೇ140ರಷ್ಟು ಜಾಸ್ತಿಯಿದೆ” ಎಂದು ಶಾಸಕ ಮಂಜುನಾಥ ಭಂಡಾರಿ ಸಚಿವರ ಗಮನಕ್ಕೆ ತಂದಿದ್ದಾರೆ.