Monday, December 23, 2024

ಮುಸ್ಲಿಮರ ಜನಸಂಖ್ಯೆ ಭಾರೀ ಏರಿಕೆ: ದಾರಿ ತಪ್ಪಿಸುವ ಮಾಧ್ಯಮ ವರದಿ

by eesamachara
0 comment

ಭಾರತದ ಧಾರ್ಮಿಕ ಜನಸಂಖ್ಯೆ ಕುರಿತು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ವರದಿಯೊಂದು ಇತ್ತೀಚಿಗೆ ಬಿಡುಗಡೆಯಾಗಿದೆ. ಈ ಕುರಿತು ದೇಶ-ರಾಜ್ಯದ ಹಲವು ಮಾಧ್ಯಮಗಳು  “ಹಿಂದೂಗಳ ಜನಸಂಖ್ಯೆ ಶೇ.8 ಕುಸಿತ, ಮುಸ್ಲಿಮರ ಜನಸಂಖ್ಯೆ 43% ರಷ್ಟು ಏರಿಕೆ” ಎಂದು ಟೈಟಲ್‍ ನೀಡಿ ವರದಿ ಮಾಡಿದವು. ನೋಡಿ ಮುಸ್ಲಿಮರು ಹೆಚ್ಚು ಮಕ್ಕಳು ಹುಟ್ಟಿಸುತ್ತಿದ್ದಾರೆ, ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ….ಎಂದೆಲ್ಲ ಎಂಬ ಭಯ ಹುಟ್ಟಿಸುವ ಕೆಲಸ ಮಾಡಿತ್ತು. ಇದರ ವಾಸ್ತವ ತಿಳಿಯೋಣ.

ಸ್ವಾತಂತ್ರ್ಯ ನಂತರ ನಡೆದ 1951ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆ 36 ಕೋಟಿ.

ಹಿಂದೂಗಳು: 30.5 ಕೋಟಿ – 84.1%

ಮುಸ್ಲಿಮರು: 3.5 ಕೋಟಿ – 9.8%

1961 ರ ಜನಗಣತಿ:

ಹಿಂದೂಗಳು: 36.7 ಕೋಟಿ

ಮುಸ್ಲಿಮರು: 4.7 ಕೋಟಿ

1971 ರ ಜನಗಣತಿ:

ಹಿಂದೂಗಳು: 45.3 ಕೋಟಿ

ಮುಸ್ಲಿಮರು: 6.1 ಕೋಟಿ

1981 ರ ಜನಗಣತಿ:

ಹಿಂದೂಗಳು: 56.2 ಕೋಟಿ

ಮುಸ್ಲಿಮರು: 8 ಕೋಟಿ

1991 ರ ಜನಗಣತಿ:

ಹಿಂದೂಗಳು: 69 ಕೋಟಿ

ಮುಸ್ಲಿಮರು: 10.7 ಕೋಟಿ

2001 ರ ಜನಗಣತಿ:

ಹಿಂದೂಗಳು: 82.8 ಕೋಟಿ

ಮುಸ್ಲಿಮರು: 13.8 ಕೋಟಿ

2011 ರ ಜನಗಣತಿ:

ಹಿಂದೂಗಳು: 96.6 ಕೋಟಿ – 79.8%

ಮುಸ್ಲಿಮರು:17.2 ಕೋಟಿ – 14.2%

ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಹಿಂದೂಗಳ ಜನಸಂಖ್ಯೆ 30 ಕೋಟಿಯಿಂದ 96 ಕೋಟಿಗೆ ಏರಿಕೆಯಾಗಿದೆ. ಅಂದರೆ ಸುಮಾರು 66 ಕೋಟಿ ಹಿಂದೂಗಳು ಅಂದಿಗಿಂತ ಹೆಚ್ಚಾಗಿದ್ದಾರೆ. ಅದೇ ರೀತಿ ಮುಸ್ಲಿಮರ ಜನಸಂಖ್ಯೆ 3.5 ಕೋಟಿಯಿಂದ 17 ಕೋಟಿಗೆ ಏರಿಕೆಯಾಗಿದೆ. ಅಂದರೆ ಸುಮಾರು 13.5 ಕೋಟಿ ಮುಸ್ಲಿಮರು ಅಂದಿಗಿಂತ ಹೆಚ್ಚಾಗಿದ್ದಾರೆ.

ಶೇಕಡವಾರು ನೋಡುವುದಾದರೆ ಹಿಂದೂಗಳ ಜನಸಂಖ್ಯೆ 84.1% ಇದ್ದುದ್ದು 79.8%ಗೆ ಅಂದರೆ 4.3% ಕುಸಿದಿದೆ. ಅದೇ ವೇಳೆಯಲ್ಲಿ ಮುಸ್ಲಿಮರ ಜನಸಂಖ್ಯೆ 9.8% ನಿಂದ 14.2ಕ್ಕೆ ಅಂದರೆ 4.4% ರಷ್ಟು ಹೆಚ್ಚಾಗಿದೆ. 1950ರಲ್ಲಿ ಇದ್ದ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಕಡಿಮೆಯಾಗಿದೆ ಮತ್ತು ಮುಸ್ಲಿಮರ ಪಾಲು ಅಧಿಕವಾಗಿದೆ ಎಂಬುದಕ್ಕೆ 43% ಹೆಚ್ಚಾಗಿದೆ ಎಂದು ದೊಡ್ಡದು ಮಾಡಿ ತೋರಿಸಲಾಗುತ್ತಿದೆ. ಅದೇ ಸಂದರ್ಭದಲ್ಲಿ ಅವರು ಮುಚ್ಚಿಡುತ್ತಿರುವ ಅಂಶಗಳೆಂದರೆ 2021ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NHFS-5) ರ ವರದಿಯಂತೆ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3 ನಿಂದ 1.9ಗೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ ಸಹ 4.4 ನಿಂದ 2.3ಗೆ ಕುಸಿದಿದೆ.

1992-93 ರಿಂದ 2021ರವರೆಗೆ ಮುಸ್ಲಿಮ್ ಮಹಿಳೆಯರ ಫಲವತ್ತತೆ ದರದಲ್ಲಿ 46.5% ಇಳಿಕೆ ಕಂಡರೆ ಹಿಂದೂಗಳಲ್ಲಿ 41.2% ಇಳಿಕೆಯಾಗಿದೆ ಎಂದು ಡೇಟಾ ಸೂಚಿಸುತ್ತದೆ. ಅಂದರೆ ಸ್ವಲ್ಪ ಪ್ರಮಾಣದಲ್ಲಿ ಮುಸ್ಲಿಮರಲ್ಲಿ ಹೆಚ್ಚಿನ ಇಳಿಕೆ ಕಂಡಿದೆ. ಇವುಗಳ ಆಧಾರದಲ್ಲಿ 2030ರ ವೇಳೆಗೆ ಎರಡೂ ಧರ್ಮದ ಫಲವತ್ತತೆಯ ದರ ಸಮಾನಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಿಂದೂಗಳ ಜನಸಂಖ್ಯೆಯ ಬೆಳವಣಿಗೆಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆಯ ಬೆಳವಣಿಗೆಯು ಕಡಿಮೆಯಾಗಲಿದೆ ಅಥವಾ ಸಮಾನಾಂತರವಾಗಲಿದೆ.

ಈ ಹಿಂದೆ ಮುಸ್ಲಿಮ್ ಜನಸಂಖ್ಯೆ ವೇಗವಾಗಿ ಬೆಳೆಯಲು ಕಾರಣ ಆ ಮಹಿಳೆಯರ ಅನಕ್ಷರತೆ, ಅಜ್ಞಾನ ಕಾರಣವೇ ಹೊರತು ಧರ್ಮವಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಮುದಾಯದಲ್ಲಿಯೂ ಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತಿಳುವಳಿಕೆ ಹೆಚ್ಚಾದಂತೆ ಜನಸಂಖ್ಯಾ ನಿಯಂತ್ರಣ ಸಾಧ್ಯವಾಗುತ್ತಿದೆ. ಉದಾಹರಣೆಗೆ ಲಕ್ಷದ್ವೀಪದಲ್ಲಿ 96% ನಷ್ಟು ಮುಸ್ಲಿಮರಿದ್ದಾರೆ. ಅಲ್ಲಿ 87% ಮಹಿಳಾ ಸಾಕ್ಷರತೆ ಇರುವ ಕಾರಣದಿಂದ ಆ ಮಹಿಳೆಯರ ಫಲವತ್ತತೆಯ ದರ ಕೇವಲ 1.4 ಮಾತ್ರ ಇದೆ. ನಮ್ಮ ಒಟ್ಟಾರೆ ಭಾರತದ ಮಹಿಳೆಯರ ಸರಾಸರಿ ಫಲವತ್ತತೆಯ ದರ 2.0 ಇದೆ. ಆದರೆ ಬಿಹಾರದಲ್ಲಿ ಕೇವಲ 51% ಮಹಿಳಾ ಸಾಕ್ಷರತೆ ಇರುವ ಕಾರಣದಿಂದ ಅಲ್ಲಿನ ಮಹಿಳೆಯರ ಫಲವತ್ತೆತೆಯ ದರ 3.0 ಕ್ಕಿಂತಲೂ ಹೆಚ್ಚಿದೆ. ಹಾಗಾಗಿ ಮಹಿಳೆಯರ ಸಾಕ್ಷರತೆಗೂ ಅವರ ಫಲವತ್ತತೆಯ ದರಕ್ಕೂ ಸಂಬಂಧವಿದೆ ಹೊರತು ಧರ್ಮದ ಜೊತೆಗಲ್ಲ.

ಬರಹ: ಮುತ್ತುರಾಜು (ಪತ್ರಕರ್ತರು- https://naanugauri.com/)

ಆಧಾರ: https://www.pewresearch.org/religion/2021/09/21/religious-composition-of-india/

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios