ಮಂಗಳೂರು: ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಶುಕ್ರವಾರ ಹಾಸನ ಜಿಲ್ಲೆಯ ಸಕಲೇಶಪುರದ ಆನೆಮಹಲ್ ಬಳಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಳ್ಯ ತಾಲೂಕಿನ ಪೈಚಾರಿನ ಶಾಂತಿನಗರದ ನಿವಾಸಿ ಮುಸ್ತಾಫ ಪೈಚಾರ್ (43) ಎಂದು ಗುರುತಿಸಲಾಗಿದೆ. ಜೊತೆಗೆ ಆಶ್ರಯ ನೀಡಿದ ಆರೋಪದಲ್ಲಿ ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಮುಸ್ತಫಾಗೆ ಎನ್‌ಐಎ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಪ್ರಕರಣ: 2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು ಆತನ ಕೋಳಿ ಅಂಗಡಿ ಬಳಿಯೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರ್ನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂದಿಸಿದಂತೆ ಹಲವು ಮಂದಿಯನ್ನು NIA ವಶಕ್ಕೆ ಪಡೆದುಕೊಂಡಿದೆ.