ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಗೆಲುವಿನ ಲೆಕ್ಕಾಚಾರ ತೀರಾ ಸರಳ. ಕಾಂಗ್ರೆಸ್ ಪಕ್ಷಕ್ಕೆ ಇಂತಹ ಸುಲಭ ಅವಕಾಶ ಈ ಹಿಂದೆ ಯಾವತ್ತೂ ಬಂದಿರಲಿಲ್ಲ. (ಮುಂದೆ ಬರುವುದು ಕಷ್ಟ). ಇಲ್ಲಿ ಈ ಸಲ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಸ್ಪರ್ಧೆ. ಬಿಜೆಪಿ ವಿರೋಧಿ ಮತಗಳ ಪಾಲು ಪಡೆಯುವ ಯಾವ ಪಕ್ಷಗಳೂ ಈ ಬಾರಿ ಕಣದಲ್ಲಿಲ್ಲ. ಅದರ ಬದಲಿಗೆ ಬಿಜೆಪಿ ವಿರೋಧಿ ಶಕ್ತಿಗಳೆಲ್ಲವೂ ತಮ್ಮದೇ ಸಾಮರ್ಥ್ಯಕ್ಕೆ ಅನುಗುಣವಾಗಿ ಬಿಜೆಪಿ ಸೋಲಿಸಲು ಕಣಕ್ಕಿಳಿದಿವೆ. (ಇದರಲ್ಲಿ ಈ ಹಿಂದೆ ಬಿಜೆಪಿ ಪರಿವಾರಕ್ಕೆ ಜೀವತೇಯ್ದವರೂ ಇದ್ದಾರೆ). ಎಡಪಕ್ಷಗಳು, ಕಾರ್ಮಿಕ, ರೈತ, ಜನ ಚಳವಳಿಗಳು ನೇರವಾಗಿ ಕಾಂಗ್ರೆಸ್ ಪರ ಬೀದಿಗಿಳಿದಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 30 ಶೇಕಡಾ ಮತಗಳು( ಮುಸ್ಲಿಮರು, ಕ್ರೈಸ್ತರು, ಸಾಂಪ್ರದಾಯಿಕ ಬಿಜೆಪಿ ವಿರೋಧಿ ಮತಗಳು ಸೇರಿ) ಯಾವುದೇ ಚೌಕಾಸಿ, ದೊಡ್ಡ ಪ್ರಯತ್ನ ಇಲ್ಲದೆ ಕಾಂಗ್ರೆಸ್ ಖಾತೆಗೆ ಬೀಳಲಿದೆ.
ಇನ್ನು ಉಳಿದ 70 ಶೇಕಡಾ ಮತಗಳಲ್ಲಿ 20 ಶೇಕಡಾ ಮತ ಸೆಳೆದರೆ ಕಾಂಗ್ರೆಸ್ ಗೆಲುವಿನ ಗೆರೆಯನ್ನು ದಾಟಲಿದೆ. ಇದರಲ್ಲಿ ಬಿಜೆಪಿ ವಿರುಧ್ಧ ಅತೃಪ್ತಿಯಿಂದ ಕುದಿಯುತ್ತಿರುವ ಅಭ್ಯರ್ಥಿ ಪದ್ಮರಾಜ್ ಸಮುದಾಯವಾದ ಬಿಲ್ಲವರ ಮತಗಳು, ಗ್ಯಾರಂಟಿ ಜನಪ್ರಿಯತೆಯ ಮತಗಳು, ನರೇಂದ್ರ ಮೋದಿ ಸರಕಾರದ ವೈಫಲ್ಯಗಳ ವಿರುದ್ದ ಇರುವ ತಣ್ಣನೆಯ ಅಸಮಾಧಾನದ ಮತಗಳು, 33 ವರ್ಷದಿಂದ ಸತತವಾಗಿ ಗೆಲ್ಲುತ್ತಿದ್ದರೂ ಯಾವ ಸಾಧನೆಯೂ ಇಲ್ಲದ ಜಿಲ್ಲೆಯ ಬಿಜೆಪಿ ವಿರುಧ್ದದ ಜನರ ಬಹಿರಂಗ ಅತೃಪ್ತಿಗಳು, ಬಿಜೆಪಿ ಒಳೇಟಿನಿಂದ ಸಿಗಬಹುದಾದ ಮತಗಳೂ ಸೇರಿವೆ.
ಬಿಜೆಪಿಗಾದರೆ ಈ 70 ಶೇಕಡಾ ಮತಗಳಲ್ಲೇ 50 ಶೇಕಡಾ ಮತಗಳನ್ನು ಸೆಳೆಯುವ ದೊಡ್ಡ ಸವಾಲು ಎದುರಾಗಿದೆ. ಅದೂ, ಕಳೆದ 3 ದಶಕಗಳಲ್ಲಿ ಯಾವತ್ತೂ ಇಲ್ಲದ ಪ್ರತಿಕೂಲದ ಸನ್ನಿವೇಶದಲ್ಲಿ, ಬಾಯಿ ಬಿಟ್ಟು ಮಾತಾಡಿದರೆ ಜನ ಸಾವಿರ ಪ್ರಶ್ನೆ ಕೇಳುವ, ಟ್ರೋಲ್ ಗೆ ಒಳಗಾಗುವ ತೀರಾ ದುರ್ಗಮ ಸ್ಥಿತಿಯಲ್ಲಿ ಬಿಜೆಪಿ ಈ 70 ರಲ್ಲಿ 50 ಮತ ಗಳಿಸುವ ಸವಾಲಿಗೆ ಒಳಗಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸುವರ್ಣಾವಕಾಶವಾಗಿ ಒದಗಿದೆ.
ಕರ್ನಾಟಕದ ಉಳಿದ 27 ಕ್ಷೇತ್ರಗಳಲ್ಲಿ ಇಂತಹ ಸರಳ ಲೆಕ್ಕಾಚಾರ, ಅವಕಾಶ ಇಲ್ಲ. ಈಗ ಅವಕಾಶ ಕಾಂಗ್ರೆಸ್ ಪರವಾಗಿದೆ. ಇನ್ನುಳಿದ ನಾಲ್ಕು ದಿನಗಳಲ್ಲಿ ಎರಡೂ ಪಕ್ಷಗಗಳು ಹೇಗೆಲ್ಲಾ ಆಟ ಆಡುತ್ತದೆ, ಪರಿಸ್ಥಿತಿಯನ್ನು ತಮ್ಮ ಪರವಾಗಿ ತಿರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಕಾಂಗ್ರೆಸ್ ಈ ಚಿನ್ನದಂತಹ ಅವಕಾಶವನ್ನು ಕಳೆದುಕೊಳ್ಳಲಾರದು ಎಂಬುದು ಎಲ್ಲರ ನಿರೀಕ್ಷೆ. ಮುಂದಕ್ಕೆ ಇಂತಹ ಅವಕಾಶ ಒದಗುವುದು ಸುಲಭ ಅಲ್ಲ.
-ಮುನೀರ್ ಕಾಟಿಪಳ್ಳ