ಬೆಂಗಳೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕರ್ನಾಟಕದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿರುವ ಕಾಂಗ್ರೆಸ್ ಗುರುವಾರ 21 ಕ್ಷೇತ್ರಗಳಿಗೆ ಬಾಕಿ ಉಳಿಸಿಕೊಂಡಿದ್ದ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸತತ ಎರಡು ದಿನಗಳ ಕಾಲ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ (ಸಿಇಸಿ) ಸಭೆ ನಡೆದಿದ್ದು, ಕರ್ನಾಟಕ ಸೇರಿ ಹಲವು ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಕರ್ನಾಟಕದ ಒಟ್ಟು 28 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 7 ಕಡೆಗೆ ಅಭ್ಯರ್ಥಿಗಳನ್ನು ಮಾ.8ರಂದು ಪ್ರಕಟಿಸಲಾಗಿತ್ತು. ಇನ್ನುಳಿದ 21 ಕ್ಷೇತ್ರಗಳಲ್ಲಿ 17 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ತೀವ್ರ ಪೈಪೋಟಿ ಸೃಷ್ಟಿಯಾಗಿರುವ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿಇಸಿ ಸಭೆಯಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ 4 ಕ್ಷೇತ್ರದ ಬಗ್ಗೆ ಹೈಕಮಾಂಡ್ ರಾಜ್ಯ ನಾಯಕರೊಂದಿಗೆ ಕೊನೆ ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸಲಿದ್ದು, ಇಂದು ಯಾವುದೇ ಕ್ಷಣದಲ್ಲಿ ಬಿಡುಗಡೆಯಾವ ನಿರೀಕ್ಷೆಯಿದೆ.
ಸ್ಕ್ರೀನಿಂಗ್ ಕಮಿಟಿಯಿಂದ ಶಿಫಾರಸ್ಸು ಮಾಡಲಾದ ಆಯಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಹಲವು ಸುತ್ತು ಹೈಕಮಾಂಡ್ ಚರ್ಚೆ ನಡೆಸಿದೆ. ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸುವಾಗಲು ಆ ಕ್ಷೇತ್ರದ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಡಿಸಿಸಿ ಅಧ್ಯಕ್ಷರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ದೆಹಲಿಯಿಂದ ಸಭೆ ಮುಗಿಸಿ ವಾಪಸ್ಸಾಗುವ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ ಡಿ.ಕೆ.ಶಿಕುಮಾರ್, “ಕಾಂಗ್ರೆಸ್ 17 ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ. ಇನ್ನು ನಾಲ್ಕು ಕ್ಷೇತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿಗೆ ಹೋಗಿ ವಿಡಿಯೋ ಕಾನ್ಫರೆನ್ಸ್ ಮೂಲಕ 4 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ” ಎಂದಿದ್ದಾರೆ.
ಎರಡನೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
- ಚಿತ್ರದುರ್ಗ – ಚಂದ್ರಪ್ಪ
- ರಾಯಚೂರು – ಕುಮಾರ ನಾಯ್ಕ್
- ಬೆಳಗಾವಿ -ಮೃಣಾಲ್ ಹೆಬ್ಬಾಳ್ಕರ್
- ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
- ಬಾಗಲಕೋಟೆ – ಸಂಯುಕ್ತ ಶಿವಾನಂದ ಪಾಟೀಲ್
- ಧಾರವಾಡ – ವಿನೋದ್ ಅಸೂಟಿ
- ಕೊಪ್ಪಳ – ರಾಜಶೇಖರ ಹಿಟ್ನಾಳ್
- ಕಲಬುರಗಿ – ರಾಧಾಕೃಷ್ಣ ದೊಡ್ಮನಿ
- ಬೀದರ್ – ಸಾಗರ್ ಖಂಡ್ರೆ
- ದಕ್ಷಿಣ ಕನ್ನಡ – ಪದ್ಮರಾಜ್
- ಮೈಸೂರು – ಎಂ.ಲಕ್ಷ್ಮಣ
- ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
- ಬೆಂಗಳೂರು ಕೇಂದ್ರ -ಮನ್ಸೂರ್ ಅಲಿ ಖಾನ್
- ಬೆಂಗಳೂರು ಉತ್ತರ – ಪ್ರೊ.ರಾಜೀವ್ ಗೌಡ
- ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
- ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್
ಅಂತಿಮವಾಗದ ಕ್ಷೇತ್ರಗಳು:
- ಕೋಲಾರ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ಬಳ್ಳಾರಿ