ಮಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದವರ ಕುಂದು ಕೊರತೆಗಳ ಸಭೆ ದ.ಕ.ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಜಮೀಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಮಾತನಾಡಿ, ಶಾದಿಭಾಗ್ಯ ಯೋಜನೆಯಿಂದ ಬಡ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂ. ಸಿಗುತ್ತಿತ್ತು. ಇದರಿಂದ ಅವರಿಗೆ ಸಹಾಯವಾಗುತ್ತಿತ್ತು. ಇದನ್ನು ರದ್ದುಪಡಿಸಿದ್ದರಿಂದ ಜಿಲ್ಲೆಯಲ್ಲಿ 2000 ಅರ್ಜಿಗಳು ಬಾಕಿಯಾಗಿವೆ. ಕೆಲವರಿಗೆ ಹಣ ಸಿಗಲೇ ಇಲ್ಲ. ಇದನ್ನು ಮತ್ತೆ ಪುನರಾರಂಭಿಸಬೇಕು. ಶಾದಿಮಹಲ್ ಯೋಜನೆಯ ಕಟ್ಟಡ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕೆಲವು ಕಡೆ ಹಣವೇ ಬಿಡುಗಡೆಯಾಗಿಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನ ನೀಡುವ ವಿಚಾರದಲ್ಲಿ ಕೇಂದ್ರದಿಂದ ತಾರತ್ಯಮ ಆಗುತ್ತಿದ್ದು, ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರ ಕಾಳನಿಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಹದಗೆಟ್ಟಿದೆ. ಹಲವು ವರ್ಷಗಳಿಂದ ಕಾಮಗಾರಿಗಳು ನಡೆದಿಲ್ಲ. ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ಕನಿಷ್ಠ 5 ಕೋಟಿ ರೂ. ಸಿಗುವಂತಾಗಬೇಕು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮೂಲಕ ಕೇಂದ್ರ ಸರಕಾರದಿಂದ ಆಗುವ ಅನ್ಯಾಯವನ್ನು ಪ್ರಾಮಾಣಿಕವಾಗಿ ತಡೆಗಟ್ಟಬೇಕು ಎಂದು ಕೇಳಿಕೊಂಡರು.
ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಅರಿವು ಯೋಜನೆ ಸ್ಥಗಿತಗೊಂಡಿದೆ. ವಿದ್ಯಾಸಿರಿ ಯೋಜನೆಯಡಿ ಹಾಸ್ಟೆಲ್ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ನೀಡಲಾಗುವ ಮೊತ್ತವೂ ಸಿಗುತ್ತಿಲ್ಲ. ಸಾಗರೋತ್ತರ ವಿದ್ಯಾಭ್ಯಾಸದ ವಿದ್ಯಾರ್ಥಿ ವೇತನಕ್ಕೆ 205 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 18 ಜನರಿಗೆ ಮಾತ್ರವೇ ದೊರಕಿದ್ದು, ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರಕಾರ ನಿಲ್ಲಿಸಿದೆ. ಮೆಟ್ರಿಕ್ ನಂತರದ ಅರ್ಜಿ ಸಲ್ಲಿಸಲು ಈ ವರ್ಷ ಅವಕಾಶವೇ ಇನ್ನೂ ಆರಂಭವಾಗಿಲ್ಲ ಕಳೆದ ವರ್ಷದ ವಿದ್ಯಾರ್ಥಿ ವೇತನ ಇನ್ನೂ ಬಿಡುಗಡೆಯೇ ಆಗಿಲ್ಲ. ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು ತಡೆ ಹಿಡಿಯಲಾಗಿದೆ. ಇದಕ್ಕಾಗಿ ಶೇ. 83 ಅಂಕಗಳ ಮಾನದಂಡದ ಮೂಲಕ ಬಡ ವರ್ಗದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕನಸನ್ನು ಕಸಿಯಲಾಗಿದೆ. ಸಾಗರೋತ್ತರ ವಿದ್ಯಾಭ್ಯಾಸದ ಕಠಿಣ ಶರತ್ತುಗಳಿಂದಾಗಿ ಈ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗಮನ ಸೆಳೆದರು.
ಶ್ರಮಶಕ್ತಿ, ಗಂಗಾಕಲ್ಯಾಣ ಯೋಜನೆಗಳಿಂದ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಯೋಜನ ಲಭಿಸುತ್ತಿಲ್ಲ. ಅರ್ಜಿ ಸಲ್ಲಿಸುವವರ ಸಂಖ್ಯೆ ಜಾಸ್ತಿಯಿದ್ದು, ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಗುರಿ ವಿಸ್ತರಿಸಬೇಕು ಎಂದು ತಿಳಿಸಿದರು.