ಮಂಗಳೂರು: ನಗರದ ಕೋಡಿಯಾಲ್ ಬೈಲ್ ಕಲಾಕುಂಜ ಬಳಿ 2016ರ ಮಾರ್ಚ್ 21 ರಂದು ನಡೆದ ಆರ್‌ಟಿಐ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ವಿಚಾರಣೆಯು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು (ನ.27) ಮತ್ತು ನಾಳೆ(ನ.28)ರಂದು ನಡೆಯಲಿದ್ದು, ಒಟ್ಟು 14ಮಂದಿಯ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಲಿದೆ.
ಈ ಪ್ರಕರಣವು ಮಂಗಳೂರಿನ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ಬೆಂಗಳೂರಿನ ಹಿರಿಯ ವಕೀಲ ಎಸ್. ಬಾಲಕೃಷ್ಣನ್ ಅವರನ್ನು ಸರಕಾರಿ ವಿಶೇಷ ಅಭಿಯೋಜಕರಾಗಿ ಬಾಳಿಗ ಕುಟುಂಬದ ಪರ ವಾದಿಸುತ್ತಿದ್ದಾರೆ.
2023ರ ಜನವರಿ 3 ರಿಂದ 5ರ ತನಕ ಮೊದಲ ಹಂತದ ಸಾಕ್ಷಿದಾರರ ವಿಚಾರಣೆ ನಡೆದಿತ್ತು. ಮೊದಲ ದಿನದ ವಿಚಾರಣೆಯಲ್ಲಿ ಸಾಕ್ಷಿಗಳಾದ ಚೇತನ್ ಕಾಮತ್, ಭಾಮಿ ಸುಧಾಕರ್ ಶೆಣೈ, ರಾಯಿ ಗಣಪತಿ ಬಾಳಿಗಾ, ಚಂದ್ರಕಾಂತ್ ಕಾಮತ್ ಮತ್ತು ವಿಶ್ವನಾಥ್ ಕಾಮತ್ ಹಾಗೂ ಎರಡನೇ ದಿನದಲ್ಲಿ ಸಾಕ್ಷಿಗಳಾದ ಕಾರ್ತಿಕ್ ಪೈ, ಮೊಹಮ್ಮದ್ ಹರ್ಷಾದ್, ದಿನೇಶ್ ಬಾಳಿಗಾ, ರಾಧಾ, ಸುಲಕ್ಷಣ, ಸೂಜಿರ್ ಬಾಲಕೃಷ್ಣ ಶೆಣೈ, ರಾಜೇಶ್ ಶೆಟ್ಟಿ, ಪದ್ಮನಾಭ ಮೂಲ್ಯ, ದೀಕ್ಷಿತ್ ಶೆಟ್ಟಿ ಅವರು ಸಾಕ್ಷಿ ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ಪ್ರಕರಣದ ಮೊದಲ ಆರೋಪಿ ನರೇಶ್ ಶೆಣೈ, ಎರಡನೇ ಆರೋಪಿ ಶ್ರೀಕಾಂತ್, ಮೂರನೇ ಆರೋಪಿ ಶಿವಪ್ರಸಾದ್, ನಾಲ್ಕನೇ ಆರೋಪಿ ವಿನಿತ್ ಪೂಜಾರಿ, ಐದನೇ ಆರೋಪಿ ನಿಶ್ಚಿತ್ ದೇವಾಡಿಗ, ಆರನೇ ಆರೋಪಿ ಶೈಲೇಶ್, ಏಳನೇ ಆರೋಪಿ ಮಂಜುನಾಥ್ ಶೆಣೈ ವಿಚಾರಣೆ ನಿಮಿತ್ತ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ವಿನಾಯಕ ಬಾಳಿಗಾ ಕೊಲೆ ಅವರ ಸಹೋದರಿ ಅನುರಾಧಾ ಬಾಳಿಗಾ ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಮೇಲಿನ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಆರೋಪಿಗಳು ಜಾಮೀನು ಮೂಲಕ ಹೊರಬಂದಿದ್ದರು. ಆರೋಪಿಗಳ ಪೈಕಿ ವಿಘ್ನೇಶ್ ನಾಯಕ್ ಎಂಬಾತನ ಮೃತದೇಹ 2020ರ ನವೆಂಬರ್‌ನಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಪ್ರಕರಣ ದಾಖಲಾಗಿತ್ತು.