ರಾಮನಗರ: ಬಿ.ವೈ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಿತ್ರ ಪಕ್ಷ ಜೆಡಿಎಸ್ ವರಿಷ್ಠ, ಮಾಜಿ ಮಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ರವಿವಾರ ಭೇಟಿ ಮಾಡಿದ್ದಾರೆ.
ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉಭಯ ನಾಯಕರ ಭೇಟಿ ರಾಜ್ಯ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ನಾನು ಜವಾಬ್ದಾರಿ ತೆಗದುಕೊಂಡ ನಂತರ ಮಾಜಿ ದೇವೇಗೌಡ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದು, ಮುಂಬರುವ ಲೋಕಸಭೆ ಚುನಾವಣೆ ಕುರಿತು ಚರ್ಚಿಸಿದ್ದೇನೆ. ದೇಶದ ಭವಿಷ್ಯ ರೂಪಿಸುವ ಲೋಕಸಭೆ ಚುನಾವಣೆ. ಹೀಗಾಗಿ 28 ಕ್ಷೇತ್ರಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ , ಜೆಡಿಎಸ್ ಗೆಲ್ಲುವುದಕ್ಕೆ ಹೊರಟಿದೆ. ಈ ಮೈತ್ರಿಯನ್ನು ಲೋಕಸಭೆ ಮಾತ್ರವಲ್ಲದೇ ಈ ರಾಜ್ಯ ಸರ್ಕಾರದ ವಿರುದ್ಧವೂ ಮುಂದವರಿಸಲಿದ್ದೇವೆ. ಆ ನಿಟ್ಟಿನಲ್ಲಿ ಮಾತುಕತೆ ಮಾಡಿದ್ದೇವೆ ಎಂದು ತಿಳಿಸಿದರು.
