Monday, December 23, 2024

ಸಂವಿಧಾನದ ಉಳಿವಿನಲ್ಲಿಯೇ ನಮ್ಮ ಉಳಿವು: ಸಂವಿಧಾನ ದಿನದ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ವಿಶೇಷ ಲೇಖನ

by eesamachara
0 comment

ಸಂವಿಧಾನದ ಶಿಲ್ಪಿಯಾಗಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಮಹತ್ವದ ದಿನ 1949ರ ನವಂಬರ್ 26. ಸಂವಿಧಾನ ರಚನಾ ಸಭೆ ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ದೀರ್ಘಕಾಲ ಐದು ಅಧಿವೇಶನಗಳಲ್ಲಿ ಚರ್ಚೆ ನಡೆಸಿದ ನಂತರ ಸಂವಿಧಾನವನ್ನು ಈ ದಿನ ಅಂಗೀಕರಿಸಿತ್ತು. ಈ ಕಾರಣಕ್ಕಾಗಿ ನಮ್ಮ ಸಂವಿಧಾನದ ಇತಿಹಾಸದಲ್ಲಿ ನವಂಬರ್ 26ಕ್ಕೆ ವಿಶೇಷವಾದ ಸ್ಥಾನ ಇದೆ.

ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎಂಬ ಹೆಮ್ಮೆಯನ್ನು ನಮಗೆ ತಂದುಕೊಟ್ಟಿರುವುದು ನಮ್ಮ ಸಂವಿಧಾನ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಲು ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಆಶಯವಾಗಿದೆ. ಯಾವ ಮೂಲ ಆಶಯಗಳಿಗಾಗಿ ಈ ಸಂವಿಧಾನವನ್ನು ಅಂಗೀಕರಿಸಿ ಜಾರಿಗೆ ತರಲಾಗಿದೆಯೋ ಅದಕ್ಕಾಗಿ ಪ್ರಮುಖ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿಯೂ, ಇನ್ನಿತರ ಹಕ್ಕುಗಳನ್ನು ಸಾಂವಿಧಾನಿಕ ಹಕ್ಕುಗಳನ್ನಾಗಿಯೂ ಸಂವಿಧಾನದಲ್ಲಿ ಖಾತರಿಪಡಿಸಲಾಯಿತು. ಈ ಹಕ್ಕುಗಳನ್ನು ಎಲ್ಲ ನಾಗರಿಕರೂ ಅನುಭವಿಸುವಂತಾಗಲು ಎಂತಹ ಆಡಳಿತ ನೀತಿಯನ್ನು ಜಾರಿಗೆ ತರಬೇಕೆಂಬ ಬಗ್ಗೆ ರಾಜನೀತಿಯ ನಿರ್ದೇಶಕ ತತ್ವವಗಳಲ್ಲಿ ಸೇರ್ಪಡೆಗೊಳಿಸಲಾಯಿತು.

ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಪ್ರಜಾರಾಜ್ಯದ ಬೀಜಾಂಕುರವಾಗಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ನಾವೆಲ್ಲ ಹೆಮ್ಮೆಯಿಂದ ನೆನಪು ಮಾಡಿಕೊಳ್ಳಬೇಕಾಗಿದೆ. ಅದು ಸಾಧ್ಯವಾಗಿರುವುದು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ನೇತೃತ್ವದಲ್ಲಿ ನಡೆದಿದ್ದ ಶರಣ ಚಳವಳಿಯಿಂದ. ಕೂಡಲಸಂಗಮದ ಅನುಭವ ಮಂಟಪ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಸ್ವರೂಪದ್ದು. ಸಮಾಜದ ಕೆಳಸ್ತರದ ಜನರು ಕೂಡ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ-ಅಹವಾಲುಗಳನ್ನು ವ್ಯಕ್ತಪಡಿಸುವ ಸಮಾನವಕಾಶ ಅನುಭವ ಮಂಟಪದಲ್ಲಿತ್ತು. ಇದು ನಾವಿಂದು ಅನುಭವಿಸುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು. ಇದರ ನಂತರ ಶತಮಾನದಷ್ಟು ಹಿಂದೆಯೇ ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಅವರು ಪ್ರಜಾಪರಿಷತನ್ನು ಸ್ಥಾಪಿಸಿ ಆ ಮೂಲಕ ಜನಪ್ರತಿನಿಧಿಗಳಿಗೆ ಸಂಸ್ಥಾನದ ಕಾರ್ಯಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳುವಿಕೆಯ ಅವಕಾಶವನ್ನು ಕಲ್ಪಿಸಿಕೊಟ್ಟಿರುವ ಇತಿಹಾಸ ನಮ್ಮಕಣ್ಣ ಮುಂದಿದೆ.

ಅಲಿಖಿತ ಸಂವಿಧಾನ: ಭಾರತದಲ್ಲಿ ನ್ಯಾಯಯುತ ಸಾಮಾಜಿಕ ವ್ಯವಸ್ಥೆಯನ್ನು ನಿರ್ವಿುಸುವ ಈ ತೀರ್ಮಾನ ಒಂದು ಚಾರಿತ್ರಿಕ ಸಂದರ್ಭದಲ್ಲಿ ಮೈದಾಳಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಈಗಿನ ಸಂವಿಧಾನ ಅಂಗೀಕಾರವಾಗುವುದಕ್ಕಿಂತ ಮೊದಲು ಭಾರತದಲ್ಲಿ ಒಂದು ಅಲಿಖಿತ ಸಂವಿಧಾನ ಇತ್ತು. ಅದು ಅಸಮಾನತೆಯನ್ನು ಒಪ್ಪಿಕೊಂಡ ಮತ್ತು ಜಾತಿ ಆಧಾರದಲ್ಲಿಯೇ ಮನುಷ್ಯನ ಯೋಗ್ಯತೆ, ಅವಕಾಶಗಳನ್ನು ನಿರ್ಧರಿಸುವ ಅಲಿಖಿತ ಸಂವಿಧಾನ. ಆ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ವರ್ಗಗಳು ಅಂದರೆ ಶೂದ್ರರು,

ಅಸ್ಪೃಶ್ಯರು ಹಾಗೂ ಬುಡಕಟ್ಟು ಜನರು ಸಂಪತ್ತನ್ನು ಹೊಂದುವ, ಜ್ಞಾನವನ್ನು ಗಳಿಸುವ ವ್ಯವಸ್ಥೆಯನ್ನು ಪ್ರವೇಶಿಸುವ ಹಕ್ಕಿನಿಂದ ವಂಚಿತರಾಗಿದ್ದರು.ಆ ಮನುಷ್ಯವಿರೋಧಿ ಅಲಿಖಿತ ಸಂವಿಧಾನವನ್ನು ಧಿಕ್ಕರಿಸಿ ಅಂಬೇಡ್ಕರ್ ಅವರು ಹೊಸದೊಂದು ಸಂವಿಧಾನವನ್ನು ಭಾರತಕ್ಕೆ ನೀಡಿದರು.

ನಮ್ಮ ಸಂವಿಧಾನದ ಕ್ರಾಂತಿಕಾರಕ ಗುಣವೆಂದರೆ ಅದು ಕೇವಲ ಮೌಲ್ಯಗಳನ್ನು ಸಾರುವುದಿಲ್ಲ, ಆಶಯಗಳನ್ನಷ್ಟೇ ಹೇಳುವುದಿಲ್ಲ. ಸಮಾನತೆಯ ನೆಲೆಯ ಮೇಲೆ ಸಮಾಜವನ್ನು ಹೇಗೆ ನಿರ್ಮಾಣ ಮಾಡಬೇಕೆಂಬುದನ್ನು ಕಾರ್ಯಕ್ರಮವಾಗಿ ನಮ್ಮ ಸಂವಿಧಾನ ಕಟ್ಟಿಕೊಡುತ್ತದೆ. ನ್ಯಾಯ ಹಾಗೂ ಸಮಾನತೆಯ ಆಧಾರದಲ್ಲಿ ಭಾರತೀಯ ಸಮಾಜವನ್ನು ಪುನರ್ ನಿರ್ಮಾಣ ಮಾಡುವ ಕೆಲಸಕ್ಕೆ ಭಾರತ ಗಣರಾಜ್ಯವು ಮುಂದಾಗಬೇಕೆಂದು ಸಂವಿಧಾನ ಸಭೆ ನಿರ್ದೇಶಿಸಿತು. ಈ ನಿರ್ದೇಶನವು ಭಾರತ ಸಂವಿಧಾನದ ಪೀಠಿಕಾ ಭಾಗದ ಬಹುಮುಖ್ಯ ಭಾಗವಾಗಿದೆ. ಭಾರತದಲ್ಲಿ ಆಧುನಿಕ ಹಾಗೂ ಪ್ರಜಾಪ್ರಭುತ್ವವಾದಿ ರಾಷ್ಟ್ರಪ್ರಭುತ್ವದ ಹುಟ್ಟಿನೊಂದಿಗೆ ಈ ಬಗೆಯ ತಡೆಗೋಡೆಗಳನ್ನು ಮುರಿಯುವ ಪ್ರಯತ್ನ ಪ್ರಾರಂಭವಾಯಿತು. ಯಾರು ಯಾವ ಸಾಮಾಜಿಕ ಮೂಲದಿಂದಲೇ ಬಂದಿರಲಿ, ಅಭಿವೃದ್ಧಿಯ ಹಾಗೂ ಪ್ರಗತಿಯ ಫಲ ಎಲ್ಲರಿಗೂ ಸೇರಬೇಕು ಎಂಬುದು ಸಂವಿಧಾನದಲ್ಲಿ ಸೂಚಿತವಾದ ಸರ್ವರನ್ನೂ ಒಳಗೊಳ್ಳುವ ಸಾಮಾಜಿಕ ಮರುರಚನೆಯ ನಿರ್ಣಯವಾಗಿದೆ.

ಅಂಬೇಡ್ಕರ್ ಎಚ್ಚರಿಕೆ: ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ತನ್ನ ಅನುಭವದ ಮೂಲಕವೇ ಕಂಡುಕೊಂಡಿದ್ದ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. 1949ರ ನವಂಬರ್ 26ರಂದು ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುತ್ತ ಅಂಬೇಡ್ಕರ್ ಅವರು ಎಚ್ಚರಿಕೆ ನೀಡಲು ಮರೆಯಲಿಲ್ಲ- ‘ಇಂದು ನಾವು ವೈರುಧ್ಯಗಳಿಂದ ಕೂಡಿರುವ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿಯುತ್ತದೆ. ರಾಜಕೀಯದಲ್ಲಿ ನಾವು ಒಬ್ಬರಿಗೆ ಒಂದು ವೋಟು ಮತ್ತು ಒಂದು ವೋಟಿಗೆ ಒಂದು ಮೌಲ್ಯ ಎಂದು ಪರಿಗಣಿಸಿರುತ್ತೇವೆ. ಆದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯ ಎಂಬ ತತ್ತ್ವವನ್ನು ನಿರಾಕರಿಸಲಾಗುತ್ತದೆ. ಇಂತಹ ವೈರುಧ್ಯಗಳನ್ನು ನಿಮೂಲನೆ ಮಾಡದೆ ಅದನ್ನು ಮುಂದುವರಿದುಕೊಂಡು ಹೋಗಲು ಅವಕಾಶ ನೀಡಿದರೆ ನಾವು ಶ್ರಮವಹಿಸಿ ಕಟ್ಟಿದ ಪ್ರಜಾಪ್ರಭುತ್ವದ ಸೌಧವನ್ನೇ ಅಸಮಾನತೆಯಿಂದ ಬಾಧಿತರಾಗುವ ಶೋಷಿತರೇ ಕೆಡವಿಹಾಕಬಹುದು’ ಎಂಬ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಾವು ಮುಖ್ಯವಾದ ಎರಡು ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದು ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ರಕ್ಷಣೆ, ಆ ಮೂಲಕ ದೇಶದ ಸಾರ್ವಭೌಮತೆಯನ್ನು ಕಾಪಾಡುವುದು. ಎರಡನೆಯದಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುತ್ತ ಹೋಗುವುದು. ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಒಟ್ಟು ಒಂದೇ ಮೌಲ್ಯವಾಗಿದ್ದು ಒಂದನ್ನು ಮತ್ತೊಂದರಿಂದ ಬೇರ್ಪಡಿಸುವುದು ಪ್ರಜಾಪ್ರಭುತ್ವದ ಆಶಯವನ್ನೇ ವಿಫಲಗೊಳಿಸುತ್ತದೆ. ‘ಸಮಾನತೆ ಇಲ್ಲದ ಸ್ವಾತಂತ್ರ್ಯ ಹಲವರ ಮೇಲೆ ಕೆಲವರ ಆಧಿಪತ್ಯವನ್ನು ಖಾಯಂಗೊಳಿಸುತ್ತದೆ’ ಎಂದು ಅಂಬೇಡ್ಕರ್ ಹೇಳಿದ್ದರು.

ಆರ್ಥಿಕ ಮತ್ತು ಸಾಮಾಜಿಕ ಸಮಾನತೆ: ಪ್ರಜಾಪ್ರಭುತ್ವದ ಮುಖ್ಯ ಆಶಯ ಸ್ವಾತಂತ್ರ್ಯ. ಅದರ ನಂತರವೇ ಸಮಾನತೆ ಮತ್ತು ಭಾತೃತ್ವ. ಪ್ರಪಂಚದಲ್ಲೆಡೆ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಗಳು ರಾಜಕೀಯ ಸಮಾನತೆಯನ್ನು ಮಾತ್ರ ಸಂವಿಧಾನಾತ್ಮಕ ಶಾಸನಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಶಾಸನಸಭೆಗಳ ಮರ್ಜಿಗೆ ಬಿಟ್ಟಿವೆ. ಆದರೆ ಚುನಾವಣಾ ಪದ್ಧತಿಯಲ್ಲಿ ಪ್ರಬಲರೇ ಆರಿಸಿ ಬರುತ್ತಿರುವುದರಿಂದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಜಾರಿಗೆ ಬರುವುದು ಸವಾಲಿನ ಕೆಲಸ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು.

ನಮ್ಮ ಬದ್ಧತೆ: ಉಳ್ಳವರ ಕೈಗೆ ರಾಜಕೀಯ ಅಧಿಕಾರವನ್ನು ನೀಡುವುದರಿಂದ ಬಡವರು, ಜಾತಿವ್ಯವಸ್ಥೆಗೆ ಬಲಿಯಾದ ಶೋಷಿತರು ಇನ್ನಷ್ಟು ಅನ್ಯಾಯ, ಶೋಷಣೆಗೊಳಗಾಗುತ್ತಾರೆ. ಇದನ್ನು ತಪ್ಪಿಸಬೇಕಾದರೆ ಮೊದಲು ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆದುಕೊಂಡು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸಬೇಕು ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ಮುಖ್ಯಮಂತ್ರಿಯಾದ ನನಗೆ ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮಗ್ರಂಥ. ಸಂವಿಧಾನದ ಆಶಯಗಳನ್ನು ಈಡೇರಿಸುವುದು ನನ್ನ ಮೂಲಭೂತ ಕರ್ತವ್ಯ. ನನ್ನ ಇಡೀ ರಾಜಕೀಯ ಜೀವನದಲ್ಲಿ ಈ ಮೂಲಭೂತ ಕರ್ತವ್ಯದ ನಿರ್ವಹಣೆಯ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೆಮ್ಮೆ ಮತ್ತು ಸಂತೃಪ್ತಿಯಿಂದ ಹೇಳಬಲ್ಲೆ. ತಲೆಮಾರುಗಳ ಕಾಲ ಅಸಮಾನತೆ ಮತ್ತು ತಾರತಮ್ಯವನ್ನು ಅನುಭವಿಸಿದವರಿಗೆ ಅವಕಾಶಗಳನ್ನು ಒದಗಿಸುವ ಒಂದು ಅಸ್ತ್ರವಾಗಿ ಅಭಿವೃದ್ಧಿಯನ್ನು ನಾನು ಪರಿಗಣಿಸಿದ್ದೆ. ನಮ್ಮೆಲ್ಲ ಯೋಚನೆ-ಯೋಜನೆಗಳಿಗೆ ಮಾರ್ಗದರ್ಶನ ನೀಡುವುದು ನಮ್ಮ ಸಂವಿಧಾನ. ಅದರೊಳಗಿನ ಅಕ್ಷರ-ಅಕ್ಷರಗಳಿಗೂ ನಾನು ಬದ್ಧನಾಗಿದ್ದೇನೆ.

ಅಂಬೇಡ್ಕರ್ ಅವರು ನೀಡಿದ್ದ ಎಚ್ಚರಿಕೆಯನ್ನು ಧಿಕ್ಕರಿಸಿದ ಪರಿಣಾಮವನ್ನು ನಾವಿಂದು ಕಾಣುತ್ತಿದ್ದೇವೆ. ಒಂದು ಅತ್ಯುತ್ತಮ ಸಂವಿಧಾನವನ್ನು ಹೊಂದಿದ್ದರೂ. ಸಾಮಾಜಿಕವಾಗಿ ಶೂದ್ರ ಮತ್ತು ದಲಿತರನ್ನು ಹೊರಗಿಡುವ ಮತ್ತು ಆರ್ಥಿಕವಾಗಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುವ ಹುನ್ನಾರಗಳನ್ನು ನಾವು ಕಾಣುತ್ತಿದ್ದೇವೆ. ನಮ್ಮ ಆರ್ಥಿಕ ಮತ್ತು ಸಾಮಾಜಿಕ ನೀತಿಗಳು ಈ ದೇಶದ ಯಾರನ್ನೂ ಜಾತಿ, ಲಿಂಗ ಅಥವಾ ವರ್ಗದ ಆಧಾರದಲ್ಲಿ ತರತಮ ಮಾಡದೆ ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಎನ್ನುವುದು ಸಂವಿಧಾನದ ಮುಖ್ಯ ಆಶಯವಾಗಿದ್ದರೂ ಆ ಎಲ್ಲ ಅನಿಷ್ಠಗಳು ಹೊಸ ರೂಪಗಳನ್ನು ಪಡೆದುಕೊಂಡು ಮುಂದುವರಿಯುತ್ತಿರುವಂತೆ ಕಾಣುತ್ತಿದೆ. ಸಂಘಟಿತವಾಗಿ ಇದನ್ನು ತಡೆದು ಸಂವಿಧಾನವನ್ನು ರಕ್ಷಿಸಲು ನಾವು ವಿಫಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದುಬೀಳುವ ಅಪಾಯ ಇದೆ. ಸಂವಿಧಾನ ಸಮರ್ಪಣಾ ದಿನವಾದ ಇಂದು ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಕೈಗೊಳ್ಳಬೇಕು. ಸಂವಿಧಾನದ ಉಳಿವಿನಲ್ಲಿ ನಮ್ಮ ಉಳಿವು ಇದೆ, ಅದರ ಅಳಿವು ನಮ್ಮ ಅಳಿವು ಕೂಡ ಆಗಿದೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios