ಬಂಟ್ವಾಳ: ಕಠಿಣ ಪರಿಶ್ರಮದಿಂದ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತೋರ್ಪಡಿಸಿದ ಹೆಗ್ಗಳಿಕೆ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿ ಲಿಯೋ ಫೆರ್ನಾಂಡೀಸ್ ಅಲ್ಲಿಪಾದೆ ಅವರದ್ದಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.
ದಿವಂಗತ ಅಂತೋನ್ ಫೆರ್ನಾಂಡೀಸ್ ಮತ್ತು ಪೌವ್ಲಿನ್ ಫೆರ್ನಾಂಡೀಸ್ ಅವರ ಹನ್ನೆರಡು ಮಂದಿ ಮಕ್ಕಳ ಪೈಕಿ ಲಿಯೋ ಫೆರ್ನಾಂಡೀಸ್ ಎಂಟನೆಯವರು. ಕೃಷಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಲಿಯೋ ಫೆರ್ನಾಂಡೀಸ್ ಅವರ ಮನಸ್ಸಿನಲ್ಲಿ ಕೃಷಿ ಮಾಡಬೇಕು ಎಂಬ ಛಲ ಚಿಗುರೊಡೆದು ಇಂದು ವರ್ಷಕ್ಕೆ ಲಕ್ಷಾಂತರ ಆದಾಯ ಕೃಷಿಯಿಂದಲೇ ಗಳಿಸುತ್ತಿದ್ದಾರೆ.
ಲಿಯೋ ಫೆರ್ನಾಂಡೀಸ್ ಅವರು ಆಂಟೋನಿ ಟ್ರೇಡರ್ಸ್ ಮೂಲಕ ಅಡಿಕೆ ಖರೀದಿಸಿ ಸ್ಥಳೀಯ ರೈತರಿಗೆ ಬೆಂಬಲ ನೀಡುವುದರ ಜೊತೆಗೆ 20 ಎಕರೆ ಪ್ರದೇಶದಲ್ಲಿ ಅಡಿಕೆ, ಕಾಳು ಮೆಣಸು, ತೆಂಗು ಮತ್ತು ಹೈನುಗಾರಿಕೆಯನ್ನು ಬಹುಬೆಳೆ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ. ಅಲ್ಲಿಪಾದೆ ಮತ್ತು ಸರಪಾಡಿ ಹಾಲು ಸೊಸೈಟಿಗಳಿಗೆ ಸುಮಾರು 600 ಲೀಟರ್ ಹಾಲನ್ನು ಪೂರೈಸಿ 2021-22ರಲ್ಲಿ ಅಗ್ರ ಪೂರೈಕೆದಾರರಾಗಿದ್ದರು.
ಇವರು ಸುಮಾರು 5000 ವರೆಗೆ ಸ್ವಂತ ಅಡಿಕೆ ಗಿಡಗಳನ್ನು ಹೊಂದಿದ್ದು, ಇತರರ ಅಡಿಕೆ, ತೆಂಗು ಮರಗಳನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದಾರೆ. ಅಲ್ಲದೆ, ಸುಮಾರು 20 ಎಕರೆ ಜಾಗದಲ್ಲಿ 15000 ಅಡಿಕೆ ಕೃಷಿ ಮಾಡಿ ವರ್ಷಂಪ್ರತಿ 350 ಕ್ವಿಂಟಲ್ ಅಡಿಕೆ ಮಾರಿ ಜೀವನ ನಡೆಸುತ್ತಿದ್ದಾರೆ. ಆಧುನಿಕ ಕೃಷಿಗೆ ಬೇಕಾದ ನೈರ್ಸಗಿಕ ಅಟ್ಟಿ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರ ಬಳಸಿ ಸರಿಸುಮಾರು 25000 ತೆಂಗು ಕೃಷಿಯಿಂದ ಲಭಿಸುತ್ತಿದೆ.
ಹೈನುಗಾರಿಕೆಯಲ್ಲಿ ವಿಶೇಷ ಆಸಕ್ತಿ ಹಾಗೂ ಅನುಭವ ಪಡೆದಿರುವ ಇವರು ಆಧುನಿಕ ಶೈಲಿಯಲ್ಲಿ ಪಶುಸಾಕಾಣಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪ್ರಸ್ತುತ 70 ಹಸುಗಳು, 35 ಕರುಗಳನ್ನು ಹೊಂದಿದ್ದಾರೆ. ಅಲ್ಲದೆ, ಕಂಬಳ ಕ್ಷೇತ್ರಕ್ಕೂ ಪ್ರಾಮುಖ್ಯತೆಯನ್ನು ನೀಡಿದ್ದು, ಎತ್ತು, ಕಂಬಳದ 4 ಕೋಣಗಳನ್ನು ಸಾಕುತ್ತಿದ್ದಾರೆ. ಹೈನುಗಾರಿಕೆಗೆ ಆಧುನಿಕ ಸೌಲಭ್ಯ ಒದಗಿಸಿ ಎಲ್ಲಾ ಪಶುಗಳಿಗೆ ಉತ್ತಮ ರೀತಿಯ ಜೋಳ, ಹುಲ್ಲು ಹಾಗೂ ಮೇವು ಪೂರೈಕೆ ಮಾಡುತ್ತಾರೆ. ವಿವಿಧ ತಳಿಯ ಪಶುಗಳನ್ನು ಹೊಂದಿದ್ದು, ಗೀರ್, ಜರ್ಸಿ, ಹೆಚ್-ಎಫ್ ಜಾತಿಯ ಪಶುಗಳಿವೆ. ಪಶುಗಳ ಸೆಗಣಿ ಹಾಗೂ ನೀರುನ್ನು ತೋಟಕ್ಕೆ ಬಳಸುತ್ತಿದ್ದಾರೆ.
ಇವರ ಕೃಷಿ ಕ್ಷೇತ್ರದ ಗಣನೀಯ ಸಾಧನೆಯನ್ನು ಗುರುತಿಸಿದ ದ.ಕ. ಜಿಲ್ಲಾಡಳಿತ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಇನ್ನು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಲಿಯೋ ಫೆರ್ನಾಂಡೀಸ್ ಅವರು ಅಲ್ಲಿಪಾದೆ ಸಂತ ಅಂತೋನಿ ಚರ್ಚಿನ ವಾಳೆಯ ಮುಖಂಡರಾಗಿ 5 ವರ್ಷ, ಚರ್ಚ್ ನ ಉಪಾಧ್ಯಕ್ಷರಾಗಿ 6 ವರ್ಷ ಸೇವೆ, ವಾಳೆಯ ಪ್ರತಿನಿಧಿಯಾಗಿ ಹಾಗೂ ಶಾಲೆಯ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿ ಸರಪಾಡಿ ಗ್ರಾಮಸ್ಥರಿಗೆ ಚಿರ ಪರಿಚಿತರಾಗಿದ್ದಾರೆ.
ಲಭಿಸಿದ ಪ್ರಶಸ್ತಿ: ಮಂಗಳೂರು-ಉಡುಪಿ ಜಿಲ್ಲಾ ಮಟ್ಟದ ರಚನಾ ಪ್ರಶಸ್ತಿ, ಕೃಷಿ ಕ್ಷೇತ್ರದ ರಚನಾ ಪ್ರಶಸ್ತಿ, ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ, ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಪ್ರಶಸ್ತಿ, ಬಂಟ್ವಾಳ ಕಂಬಳ ಮುಡೂರು-ಪಡೂರು, ಜೋಡುಕರೆ ಕೃಷಿ ಕ್ಷೇತ್ರದ ಸಾಧಕ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಐಡಾ ಫೆರ್ನಾಂಡೀಸ್ ಅವರ ಜೊತೆ ವಿವಾಹವಾಗಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದಾರೆ.