ಬೆಂಗಳೂರು: ಬಿಜೆಪಿ ಜೊತೆಗೆ ನನ್ನ ಸಂಬಂಧ ನೂರಕ್ಕೆ ನೂರು ಮುಗಿದ ಅಧ್ಯಾಯ. ನಾನು ಸ್ವತಂತ್ರವಾಗಿಯೇ ಮುಂದುವರಿಯುತ್ತೇನೆ ಎಂದು ಗಂಗಾವತಿ ಕ್ಷೇತ್ರದ ಕೆಆರ್ಪಿಪಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ. ಕೆಆರ್ಪಿಪಿ ಪಕ್ಷದ ಸ್ಥಾಪಿಸಿದಾಗ ಯಾರೆಲ್ಲಾ ಎಷ್ಟೇ ಪ್ರಯತ್ನಿಸಿದರೂ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸ್ವತಂತ್ರವಾಗಿಯೇ ನಾನು ಮುಂದೆ ಹೋಗುತ್ತೇನೆ. ರಾಜಕೀಯ, ಸಿದ್ಧಾಂತ ಇಟ್ಟುಕೊಂಡು ನಾನು ಹೋಗುವಾಗ ಯಾವ ಸ್ನೇಹ, ಸಂಬಂಧದ ಪ್ರಶ್ನೆ ಬರುವುದೇ ಇಲ್ಲ. ನನ್ನ ಯೋಚನೆ, ಯೋಜನೆಗಳೇ ಪ್ರತ್ಯೇಕವಾಗಿರುವಾಗ ನನ್ನ ಹಾದಿಯಲ್ಲೇ ನಾನು ಹೋಗುತ್ತೇನೆ ಎಂದರು.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಯಾರೂ ನನ್ನ ಸಂಪರ್ಕ ಮಾಡಿಲ್ಲ, ನಾನೂ ಯಾರನ್ನೂ ಸಂಪರ್ಕ ಮಾಡಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಫರ್ಧೆ ಮಾಡುವುದಿಲ್ಲ. ಆದರೆ, ಎಂಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಲಸ ಮಾಡುತ್ತೇನೆ ಎಂದು ನುಡಿದರು.
ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಗಾಲಿ ಜನಾರ್ದನ ರೆಡ್ಡಿ ಅವರು ಕಟ್ಟಿದ ಕೆಆರ್ಪಿಪಿ ಪಕ್ಷ ದೊಡ್ಡ ಹೊಡೆತ ನೀಡಿತ್ತು. ಇದರಿಂದಾಗಿ ಎಚ್ಚೆತ್ತ ಬಿಜೆಪಿ ಈಗ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಲು ಮುಂದಾಗಿದೆ ಎನ್ನಲಾಗಿದೆ.