Saturday, April 19, 2025

‘ದೊಡ್ಡ ವಿಷಯವಲ್ಲ, ಕಾಂಗ್ರೆಸ್ ಉತ್ತರಿಸಲಿದೆ’: ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಬಗ್ಗೆ ಖರ್ಗೆ ಪ್ರತಿಕ್ರಿಯೆ

by eesamachara
0 comment

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi)  ಕುರಿತಂತೆ ‘ಪನೌತಿ’ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿಗೆ(Rahul Gandhi) ಇಂದು ಚುನಾವಣಾ ಆಯೋಗ ಜಾರಿಗೊಳಿಸಿದ ನೋಟಿಸ್ ಗೆ ಕಾಂಗ್ರೆಸ್ ಉತ್ತರ ನೀಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.  

“ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಲಿ ನಾವು ಉತ್ತರಿಸುತ್ತೇವೆ. ಇದು ದೊಡ್ಡ ವಿಷಯವಲ್ಲ. ಯಾರ ಮೇಲೂ ಅಂತಹ ತೀವ್ರ ಟೀಕೆಗಳು ಬಂದಿಲ್ಲ. ಆದರೆ ಚುನಾವಣೆ ನಡೆಯುತ್ತಿರುವುದರಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ನೋಟಿಸ್ ಗೆ ಉತ್ತರ ಕೊಡುತ್ತೇವೆ. ಚುನಾವಣೆಯಲ್ಲಿ ಹೆದರಿಸಲು ಯತ್ನಿಸುತ್ತಿರುವ ರೀತಿ ಸರಿಯಿಲ್ಲ. ಪ್ರಜಾಪ್ರಭುತ್ವ ಉಳಿಸಬೇಕಾದರೆ ಸಮವಾದ ವೇದಿಕೆ ಇರಬೇಕು. ಬದಲಾಗಿ ಇಡಿ, ಸಿಬಿಐ ಇತ್ಯಾದಿಗಳನ್ನು ಬಳಸಲಾಗುತ್ತಿದೆ” ಎಂದು ಖರ್ಗೆ ಅವರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಏನಿದು ನೋಟಿಸ್?:  ಮಂಗಳವಾರ ರಾಜಸ್ಥಾನದಲ್ಲಿ ನಡೆದ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಚುನಾವಣೆ ಸಂದರ್ಭ ಪ್ರಮುಖ ವಿಚಾರಗಳಿಂದ ಜನರ ಗಮನವನ್ನು ಪ್ರಧಾನಿ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅವರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ‘ಹಿಂದು-ಮುಸ್ಲಿಂ’ ಬಗ್ಗೆ ಮಾತನಾಡುತ್ತಾರೆ ಮತ್ತು ಕೆಲವೊಮ್ಮೆ ಕ್ರಿಕೆಟ್ ಪಂದ್ಯಕ್ಕೆ ಹೋಗುತ್ತಾರೆ. ನಮ್ಮ ಹುಡುಗರು ವಿಶ್ವ ಕಪ್ ಗೆಲ್ಲುತ್ತಿದ್ದರು ಆದರೆ ಪನೌತಿ (ಅದೃಷ್ಟಹೀನ) ನಮಗೆ ಪಂದ್ಯ ಸೋಲುವಂತೆ ಮಾಡಿದೆ, ಪಿಎಂ ಎಂದರೆ ಪನೌತಿ ಮೋದಿ” ಎಂದು ವಿಶ್ವ ಕಪ್ ಫೈನಲ್‌ನಲ್ಲಿ ಭಾರತ ಸೋತಿರುವ ಕುರಿತು ಉಲ್ಲೇಖಿಸುತ್ತಾ ಹೇಳಿಕೆ ನೀಡಿದ್ದರು. ಇದು ಭಾರೀ ವೈರಲ್ ಆಗಿತ್ತು.

ಬಿಜೆಪಿ ದಾಖಲಿಸಿರುವ ದೂರಿನ ಆಧಾರದಲ್ಲಿ ತಮ್ಮ ಹೇಳಿಕೆ ಕುರಿತಂತೆ ವಿವರಣೆ ನೀಡುವಂತೆ ಆಯೋಗ ರಾಹುಲ್ ಗಾಂಧಿಗೆ  ನೋಟಿಸ್ ನೀಡಿದ್ದು, ಶನಿವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

ರಾಜಕೀಯ ಎದುರಾಳಿಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಚುನಾವಣಾ ಮಾದರಿ ನೀತಿ ಸಂಹಿತೆ ನಿಷೇಧಿಸುತ್ತದೆ ಎಂಬ ಅಂಶವನ್ನು ಚುನಾವಣಾ ಆಯೋಗವು ರಾಹುಲ್‌ಗೆ ಕಳುಹಿಸಿದ ನೋಟಿಸಿನಲ್ಲಿ ವಿವರಿಸಿದೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios