Monday, December 23, 2024

ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ನಿರ್ಮೂಲನೆ ಆಗಲಿದೆ: ಜಮೀರ್ ಅಹ್ಮದ್ ಖಾನ್

by eesamachara
0 comment

ಮಂಗಳೂರು: ಪ್ರಧಾನಿ ಮೋದಿಯವರ ಅಚ್ಛೇದಿನ್ ಬಡ ಜನರಿಗೆ ಬಂದಿಲ್ಲ, ಬಿಜೆಪಿ ನಾಯಕರಿಗೆ ಬಂದಿದೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ನಿರ್ಮೂಲನೆ ಆಗಲಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಮಂಗಳೂರು ಪ್ರವಾಸದ ನಿಮಿತ್ತ ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

“ಕಾರ್ಯಕರ್ತರ ದುಡಿಮೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅವರನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡಬೇಕು. ಜನರು ನಂಬಿ ನಮ್ಮನ್ನು ಆರಿಸಿದ್ದಾರೆ. ಅದರಂತೆ ನುಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಅಧಿಕಾರವಧಿಯಲ್ಲಿ ಅಲ್ಪಸಂಖ್ಯಾತರಿಗಿದ್ದ ಪ್ರಮುಖ ಯೋಜನೆಗಳನ್ನು ಕಡಿತಗೊಳಿಸಲಾಗಿದೆ. ಬಿಜೆಪಿ  ಸಾಧನೆ ತೋರಿಸಿ ಮತ ಕೇಳುವುದಿಲ್ಲ. ಬದಲಾಗಿ ಜಾತಿ, ಧರ್ಮದ ಮಧ್ಯೆ ಒಡಕನ್ನುಂಟು ಮಾಡಿ ಮತ ಕೇಳುತ್ತದೆ. ಇವರ ಸಾಧನೆ ಶೂನ್ಯ. ಆದರೆ, ಕಾಂಗ್ರೆಸ್ ಸಾಧನೆ ತೋರಿಸಿ ಅಧಿಕಾರಕ್ಕೆ ಬಂದಿದೆ” ಎಂದು ತಿಳಿಸಿದರು.

“ಚುನಾವಣೆ ದೃಷ್ಟಿಯಿಂದ ಗ್ಯಾಸ್ ಬೆಲೆ ಇಳಿಕೆ ಮಾಡಲಾಗಿದ್ದು, ಚುನಾವಣೆ ಬಳಿಕ ಹೆಚ್ಚಾಗಲಿದೆ. ನಮ್ಮ ಭಾಗದ ಜನರಿಗೆ ಬಿಜೆಪಿಯ ಬಗ್ಗೆ ಅರ್ಥವಾಗಿದೆ. ಈ ಭಾಗದ ಜನರಿಗೆ ಮುಂದೆ ಅರ್ಥ ಆಗಲಿದೆ ಎಂದವರು, ಮುಂದಿನ ಲೋಕಸಭಾ, ಸ್ಥಳೀಯಾಡಳಿತ ಚುನಾವಣೆಗೆ ಕಾರ್ಯಕರ್ತರು, ನಾಯಕರು ಕಾರ್ಯಪ್ರವೃತ್ತರಾಗಿ ದುಡಿಯಬೇಕು” ಎಂದು ಕರೆ ನೀಡಿದರು.

ಇದೇ ವೆಳೆ ಕಾಂಗ್ರೆಸ್ ಮುಖಂಡರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಪೌರಾಡಳಿತ, ಹಜ್ ಸಚಿವ ರಹೀಂ ಖಾನ್ ಮಾತನಾಡಿದರು. ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಐವನ್ ಡಿಸೋಜ,  ಹಿರಿಯರಾದ ಕಣಚೂರ್ ಮೋನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜೆ.ಎ.ಬಾವ, ಇನಾಯತ್ ಅಲಿ, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಭಾಸ್ಕರ್.ಕೆ, ಮುಖಂಡರಾದ ಡಾ.ರಘು, ನವೀನ್ ಡಿಸೋಜಾ, ಜೋಕ್ಕಿಂ ಡಿಸೋಜ, ಲುಕ್ಮಾನ್ ಬಂಟ್ವಾಳ್, ಲಾರೆನ್ಸ್ ಡಿಸೋಜ, ಅಬ್ಬಾಸ್ ಅಲಿ, ಮನೋರಾಜ್ ರಾಜೀವ್, ಶುಭಾಚ್ ಚಂದ್ರ ಶೆಟ್ಟಿ ಕೊಳ್ನಾಡ್, ಸುಹಾನ್ ಆಳ್ವ, ನಾರಾಯಣ್ ನಾಯ್ಕ್, ಉಲ್ಲಾಸ್ ಕೋಟ್ಯಾನ್, ಪೂರ್ನೇಶ್ ಭಂಡಾರಿ, ಅಬು ಸಮೀರ್, ಸುದರ್ಶನ್ ಜೈನ್, ಎಂ.ಎಸ್. ಮಹಮ್ಮದ್, ಚೇತನ್ ಬೆಂಗ್ರೆ, ಟಿ.ಎಂ.ಶಹೀದ್ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು. ಶಬ್ಬೀರ್.ಎಸ್ ವಂದಿಸಿದರು. ಕೆ.ಕೆ.ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios