ಬೆಂಗಳೂರು: ವಿಧಾನಸಭೆ ನೂತನ ಸ್ವೀಕರ್ ಆಗಿ ಯು.ಟಿ. ಖಾದರ್ ಅವರು ಸರ್ವಾನುಮತದಿಂದ ಬುಧವಾರ ಆಯ್ಕೆಯಾಗಿದ್ದಾರೆ. ಬಳಿಕ ವಿಧಾನಸಭೆಯಲ್ಲಿ ಯು.ಟಿ. ಖಾದರ್ ಅವರ ಕುರಿತು ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆಯ ಮಾತುಗಳನ್ನಾಡಿ ಅಭಿನಂದನೆ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, “ಸ್ಪೀಕರ್ ಯು.ಟಿ.ಖಾದರ್ಗೆ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸದನವೀರ ಪ್ರಶಸ್ತಿಯೂ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿಯೂ ಯು.ಟಿ.ಖಾದರ್ ಉತ್ತಮ ಕೆಲಸ ಮಾಡಿದ್ದಾರೆ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ನಾಡಿನ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಹಿತರಕ್ಷಣೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಸ್ಥಾನ ಅತ್ಯುನ್ನತವಾದುದು. ರಾಜ್ಯದ ಜಿಡಿಪಿ ಬೆಳವಣಿಗೆ ಕೂಡ ಆಗಬೇಕು” ಎಂದು ಹೇಳಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, “ಯು.ಟಿ.ಖಾದರ್ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಯು.ಟಿ.ಖಾದರ್ ವಿಪಕ್ಷ ಉಪನಾಯಕರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ಈ ಹಿಂದೆ ಸ್ಪೀಕರ್ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನ್ಯಾಯಾಂಗಕ್ಕಿಂತ ಎತ್ತರವಾದದ್ದು ಸ್ಪೀಕರ್ ಸ್ಥಾನ. ನಿಷ್ಪಕ್ಷಪಾತವಾಗಿ ತಾವು ಸದನವನ್ನು ನಡೆಸಬೇಕು. ವಿಪಕ್ಷ ಸದಸ್ಯರ ಹೇಳಿಕೆಗೆ ಸ್ಪೀಕರ್ ಹೆಚ್ಚು ಅವಕಾಶ ಕೊಡಬೇಕು. ಚರ್ಚೆ ವೇಳೆ ಕೊನೆಯ ಸಾಲಿನವರಿಗೆ ಹೆಚ್ಚು ಅವಕಾಶ ಕೊಡಬೇಕು. ಸ್ಪೀಕರ್ ಹೊಸ ವಿಚಾರಕ್ಕೆ ಅವಕಾಶ ಮಾಡಿಕೊಡುವ ವಿಶ್ವಾಸವಿದೆ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ” ಎಂದು ತಿಳಿಸಿದರು.