ಬೆಂಗಳೂರು: ಫ್ರೀಡಂ ಆ್ಯಪ್ ಪ್ರಚಾರಕ್ಕೆ ಯುವಕ-ಯುವತಿಯರನ್ನು ಬಳಸಿಕೊಂಡು ಹಣ ನೀಡದೆ ವಂಚಿಸಿರುವ ಆರೋಪದಡಿ ಇಂಡಿಯನ್ ಮನಿ ಫ್ರೀಡಂ (indianmoney.com) ಕಂಪನಿ ಸಿಇಒ ಸಿ.ಎಸ್. ಸುಧೀರ್ ಸೇರಿ 23 ಆರೋಪಿಗಳ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
“ಜನರನ್ನು ವಂಚಿಸುವ ಉದ್ದೇಶದಿಂದ ಕಂಪನೆಯ ಸಿಇಒ ಸುಧೀರ್ ಹಾಗೂ ಇತರರು ಅಪರಾಧಿಕ ಸಂಚು ರೂಪಿಸಿ ಫ್ರೀಡಂ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಆ್ಯಪ್ ಪ್ರಚಾರಕ್ಕಾಗಿ ನಮಗೆ ಕಂಪನಿಯವರು ಅರೆಕಾಲಿಕ ಕೆಲಸದ ಆಮಿಷವೊಡ್ಡಿದ್ದಾರೆ. ಹೆಚ್ಚು ಜನರಿಂದ ಡೌನ್ಲೋಡ್ ಮಾಡಿಸಿದರೆ ಹಾಗೂ ಚಂದಾರಾರನ್ನಾಗಿ ಮಾಡಿಸಿದರೆ ಪ್ರತಿ ತಿಂಗಳು 15 ಸಾವಿರ ರೂ. ನೀಡುವುದಾಗಿ ಹೇಳಿದ್ದರು. ಆದರೆ ಕಂಪನಿಯವರು, ಎಲ್ಲ ಕೆಲಸ ಮಾಡಿಸಿಕೊಂಡು ನಿಗದಿತ ದಿನದೊಳಗೆ ಸಂಬಳ ಕೊಟ್ಟಿಲ್ಲ. ಅಲ್ಲದೆ, ಕಾರಣ ನೀಡದೇ ನಮ್ಮನ್ನೆಲ್ಲರನ್ನೂ ಕೆಲಸದಿಂದ ತೆಗೆದಿದ್ದಾರೆ” ಎಂದು ನೊಂದ ಯುವಕ-ಯುವತಿಯರು ಸೇರಿ 21 ಮಂದಿ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಸುಧೀರ್ ಹಾಗೂ ಇತರ ಆರೋಪಿಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ವಿಚಾರಣೆಗಾಗಿ ತನಿಖಾಧಿಕಾರಿ ಎದುರು ಹಾಜರಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು. ವಿಚಾರಣೆಗೆ ಬರುವಂತೆ ಸುಧೀರ್ ಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಸುಧೀರ್ ಠಾಣೆಗೆ ಬಂದು ವಿಚಾರಣೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
“ದೂರು ಹಿಂಪಡೆಯುವಂತೆ ಕಂಪನಿಯವರು ಹಣದ ಆಮಿಷಹೊಡ್ಡಿದ್ದರು. ಅಲ್ಲದೆ, ಹಲವು ಬೆದರಿಕೆಗಳು ಹಾಕಿದ್ದಾರೆ” ಎಂದು ಸಂತ್ರಸ್ತರ ಪೈಕಿ ಯುವತಿಯೋರ್ವಳು ಖಾಸಗಿ ತನಿಖಾ ಮಾಧ್ಯಮ vijayatimes ಗೆ ಪ್ರತಿಕ್ರಿಯಿಸಿದ್ದಾಳೆ.