ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಬಿಡುಗಡೆಗೊಂಡ ಮೊದಲ ಪಟ್ಟಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರಿದ್ದು, ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ.
ಈ ಮೊದಲು ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ಆಸಕ್ತಿ ವಹಿಸಿದ್ದರು. ಆದರೆ ಇತ್ತೀಚಿಗೆ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಜೊತೆ 15 ನಿಮಿಷಗಳ ಕಾಲ ಪ್ರತ್ಯೇಕ ಮಾತುಕತೆ ನಡೆಸಿ, “ನಿಮಗೆ ಕೋಲಾರ ಸೂಕ್ತ ಅಲ್ಲ, ನೀವು ವರುಣಾದಿಂದಲೇ ಸ್ಪರ್ಧೆ ಮಾಡಿ, ನಿಮ್ಮ ಪ್ರತಿ ಒಂದು ನಿಮಿಷವೂ ಪಕ್ಷಕ್ಕೆ ಅಗತ್ಯವಾಗಿದೆ” ಎಂದು ಸಲಹೆ ನೀಡಿದ್ದರು. ಇದಕ್ಕೆ ಸಿದ್ದರಾಮಯ್ಯ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದರು. ಕುಟುಂಬದ ಸದಸ್ಯರ ಜತೆಗೆ ಸಮಾಲೋಚಿಸಿ ವರುಣಾದಿಂದ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ನಿನ್ನೆ ತೀರ್ಮಾನಿಸಿದ್ದರು. ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದರು. ಅದರ ಬೆನ್ನಲ್ಲೇ ಇಂದು ಮೊದಲ ಪಟ್ಟಿ ಪ್ರಕಟವಾಗಿದೆ.
ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗಿಲ್ಲ.