ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಯು.ಕೆ.ಮೋನು, ಜಿ.ರಾಮಕೃಷ್ಣ ಆಚಾರ್ ಹಾಗೂ ಎಂ.ಬಿ.ಪುರಾಣಿಕ್ ಅವರಿಗೆ 41ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ಕುಲಾಧಿಪತಿ ಅನುಮೋದನೆ ನೀಡಿದ್ದಾರೆ ಎಂದು ವಿವಿಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
“ಕಣಚೂರು ಗ್ರೂಪ್ ಆಫ್ ಇಂಡಸ್ಟ್ರೀಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಯು.ಕೆ.ಮೋನು 2002ರಲ್ಲಿ ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಸಂಸ್ಥೆ ಸ್ಥಾಪಿಸಿ ಸ್ಥಳೀಯ ಮಹಿಳೆಯರು ಹಾಗೂ ಬಡವರಿಗೆ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗಿದ್ದಾರೆ. ಈ ಅಕಾಡೆಮಿಯು ಕಣಚೂರು ಪಬ್ಲಿಕ್ ಸ್ಕೂಲ್, ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜು, ಕಣಚೂರು ಉದ್ಯಮಾಡಳಿತ ಮತ್ತು ವಿಜ್ಞಾನ ಸಂಸ್ಥೆ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಣಚೂರು ಫಿಸಿಯೋಥೆರಪಿ ಕಾಲೇಜು, ಕಣಚೂರು ನರ್ಸಿಂಗ್ ವಿಜ್ಞಾನ ಕಾಲೇಜು, ಕಣಚೂರು ಆರೋಗ್ಯ ವಿಜ್ಞಾನಗಳ ಸಂಸ್ಥೆ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿದೆ.”
“ಸಯ್ಯದ್ ಮದನಿ ಚಾರಿಟಬಲ್ ಟ್ರಸ್ಟ್ ಮತ್ತು ಉಳ್ಳಾಲ ದರ್ಗಾ ಅಸೋಸಿಯೇಷನ್ ಅಧ್ಯಕ್ಷರೂ ಆಗಿದ್ದ ಯು.ಕೆ.ಮೊನು ಅವರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಪಂಜಳದ ಮೊಹಿಯುದ್ದೀ ನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ, ದಕ್ಷಿಣ ಭಾರತ ಪ್ಲೈ ವುಡ್ ತಯಾರಕರ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಬಿಜಿನೆಸ್ ವೆಂಚರ್ ಮೂಲಕ ಜಾಗತಿಕ ಮಟ್ಟದಲ್ಲಿ ಉದ್ಯೋ ಗ ಪಡೆಯಲು ಅನೇಕರಿಗೆ ನೆರವಾಗಿದ್ದಾರೆ. ಉಚಿತ ವಿವಾಹ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕವೂ ಬಡವರಿಗೆ ನೆರವಾಗಿದ್ದಾರೆ” ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಕುಂದಾಪುರ ಗಂಗೊಳ್ಳಿಯ ಜಿ.ರಾಮಕೃಷ್ಣ ಆಚಾರ್ ಅವರು ಕೃಷಿ ಕ್ಷೇತ್ರ , ಸಮಾಜ ಸೇವಾ ಕ್ಷೇತ್ರದ ಸಾಧಕರಾಗಿದ್ದಾರೆ. ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್ ಅವರು 34 ವರ್ಷ ಕಾಲ ಪ್ರಾಧ್ಯಾಪಕರಾಗಿ, ಸಸ್ಯವಿಜ್ಞಾನ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ನಾಲ್ಕು ಪ್ರತ್ಯೇಕ ಪ್ರಾಂಗಣಗಳಲ್ಲಿ 10 ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ.
ಮಾ.15ರಂದು ನಡೆಯುವ ಮಂಗಳೂರು ವಿವಿಯ ಘಟಿಕೋತ್ಸ ವದಲ್ಲಿ ಪದವಿ ಪ್ರದಾನ ಮಾಡಲಾಗುವುದು.