ಮಂಗಳೂರು: ಶಾಸಕ ಹರೀಶ್ ಪೂಂಜ ಅವರು, ಸತ್ಯಾಂಶ ಮರೆಮಾಚಿ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದಾರೆ ಎಂದು ಸುದ್ದಿ ಬಿಡುಗಡೆ ಪತ್ರಿಕೆಯ ಪ್ರತಿನಿಧಿಗಳು ಆರೋಪಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದ್ದಿ ಬಿಡುಗಡೆಯ ನಿಯೋಜಿತ ಸಂಪಾದಕ ಸಂತೋಷ್ ಶಾಂತಿನಗರ, ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ನಡೆಸಿದ ಸರ್ವೆ ಆಧರಿಸಿ ಅರಣ್ಯ ಇಲಾಖೆಯವರು ತಯಾರಿಸಿದ ಒತ್ತುವರಿದಾರರ ಪಟ್ಟಿಯನ್ನು ಗ್ರಾ.ಪಂ.ನಿಂದ ಪಡೆದು ಪತ್ರಿಕೆಯಲ್ಲಿ ಪ್ರಕಟಿಸಿದ ಬಗ್ಗೆ ಆಕ್ಷೇಪ ಎತ್ತಿರುವ ಸ್ಥಳೀಯ ಶಾಸಕ ಹರೀಶ್ ಪೂಂಜ ಪತ್ರಿಕೆಯ ವರದಿಗಾರರನ್ನು ನಿಂದಿಸಿ ಪತ್ರಿಕೆಯನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಈ ಮೂಲಕ ಅವರು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.
ಪತ್ರಿಕೆಯ ಮಾರ್ಚ್ 7ರಿಂದ 14ರ ಸಂಚಿಕೆಯಲ್ಲಿ ಅರಣ್ಯ ಇಲಾಖೆಯ ಮಾಹಿತಿಯನ್ನು ಆಧರಿಸಿ 94 ಒತ್ತುವರಿದಾರರ ಪಟ್ಟಿಯ ಕುರಿತಂತೆ ವರದಿ ಪ್ರಕಟಿಸಲಾಗಿತ್ತು. ಈ ವರದಿ ಆಧಾರದಲ್ಲಿ ಶಾಸಕ ಕಳೆಂಜ ಗ್ರಾಮಸ್ಥರ ಸಭೆ ನಡೆಸಿದ್ದಾರೆ ಈ ವೇಳೆ ಅವರು ಸುದ್ದಿ ಬಿಡುಗಡೆ ಪತ್ರಿಕೆಯನ್ನು ಪೀತ ಪತ್ರಿಕೆ. ಅರಣ್ಯ ಇಲಾಖೆಯ ಜತೆ ಶಾಮೀಲಾಗಿ ಹಣ ಪಡೆದು ವರದಿ ಪ್ರಕಟಿಸಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಸಭೆಯಲ್ಲಿ ಜನರನ್ನು ಪತ್ರಿಕೆ ವಿರುದ್ಧ ಪ್ರಚೋದಿಸಿದ್ದಾರೆ ಎಂದು ಸಂತೋಷ್ ಹೇಳಿದರು.
ಈ ಸಂದರ್ಭ ದಾಮೋದರ್ ದುಂಡುಹೊಳೆ, ಪತ್ರಿಕೆಯ ಸುದ್ದಿ ಸಂಪಾದಕ ಭುವನೇಂದ್ರ, ವರದಿಗಾರ ಮಂಜುನಾಥ ರೈ ಉಪಸ್ಥಿತರಿದ್ದರು.