ದೆಹಲಿ: ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಎರಡನೇ ಹಂತದ ಮತದಾದನ ಮೇ 7 ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ. ದೇಶದಲ್ಲಿ 1.8 ಕೋಟಿ ಮತದಾರರು ಮೊದಲ ಬಾರಿಗೆ ಮತಚಲಾವಣೆ ಮಾಡಲಿದ್ದಾರೆ. 49.70 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು, 19.74 ಕೋಟಿ ಯುವ ಮತದಾರರು ಹಾಗೂ 2.18 ಲಕ್ಷ ಶತಾಯುಷಿ ಮತದಾರರು ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಮೇಲೂ ನಿಗಾ ಇಡಲಾಗುವುದು. ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ. ರಾಷ್ಟ್ರಕ್ಕೆ ನಿಜವಾದ ಹಬ್ಬದ, ಪ್ರಜಾಸತ್ತಾತ್ಮಕ ವಾತಾವರಣವನ್ನು ನೀಡಲು ನಾವು ಬದ್ಧರಾಗಿದ್ದೇವೆ. 17ನೇ ಲೋಕಸಭೆಯ ಅವಧಿಯು 16 ಜೂನ್ 2024 ರಂದು ಮುಕ್ತಾಯಗೊಳ್ಳಲಿದೆ. ಮತದಾನ ಕೇಂದ್ರಗಳಲ್ಲಿ ನೀರು, ಶೌಚಾಲಯ, ಹೆಲ್ಪ್ಡೆಸ್ಕ್, ವಿದ್ಯುತ್ ಸೇರಿ ಮೂಲಕ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. 85 ವರ್ಷ ಮೇಲ್ಪಟ್ಟವರಿಗೆ, 40%ಕ್ಕೂ ಹೆಚ್ಚು ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾನ ಕೇಂದ್ರಗಳಲ್ಲಿ ವ್ಹೀಲ್ಚೇರ್ ವ್ಯವಸ್ಥೆ ಇರಲಿದ್ದು, ಸ್ವಯಂಸೇವಕರೂ ಇರಲಿದ್ದಾರೆ ಎಂದು ಹೇಳಿದರು.
ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲಿಸಲಾಗುವುದು. ಚುನಾವಣೆಯಲ್ಲಿ ಹಿಂಸೆಗೆ ಅವಕಾಶ ನೀಡಲ್ಲ. ಎಲ್ಲಾ ಕಡೆ ಚೆಕ್ಪೋಸ್ಟ್ ಇರಲಿವೆ, ಡ್ರೋನ್ ಮೂಲಕ ಕಣ್ಗಾವಲು ಇರಿಸಲಾಗುವುದು. ರೈಲ್ವೆ ಸ್ಟೇಷನ್, ಏರ್ಪೋರ್ಟ್ಗಳಲ್ಲಿ ತಪಾಸಣೆ ನಡೆಯಲಿದೆ. ಹೆಲಿಕಾಪ್ಟರ್, ಖಾಸಗಿ ವಿಮಾನಗಳಲ್ಲೂ ಕೂಡ ತಪಾಸಣೆ ನಡೆಸಲಾಗುವುದು. ಎಲ್ಲಾ ವಾಹನಗಳನ್ನು ಕೂಡ ತಪಾಸಣೆ ನಡೆಸಲಾಗುವುದು. 24 ಗಂಟೆಗಳ ಕಂಟ್ರೋಲ್ ರೂಂಗಳು ಕರ್ತವ್ಯ ನಿರ್ವಹಿಸಲಿವೆ. ಸಿಆರ್ಪಿಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗುವುದು. ರೌಡಿಶೀಟರ್ಗಳ ಮೇಲೂ ತೀವ್ರ ನಿಗಾ ಇಡಲಾಗುವುದು. ಅಂತರಾಷ್ಟ್ರೀಯ ಗಡಿಯಲ್ಲೂ ಡ್ರೋಣ್ ಮೂಲಕ ಕಣ್ಗಾವಲು ಇರಿಸಲಾಗುವುದು ಎಂದರು.
ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.
ಏಪ್ರಿಲ್ 19ರಂದು ಮೊದಲ ಹಂತದ ಮತದಾನ
ಏಪ್ರಿಲ್ 26ರಂದು ಎರಡನೇ ಹಂತದ ಮತದಾನ
ಮೇ 7ರಂದು ಮೂರನೇ ಹಂತದ ಮತದಾನ
ಮೇ 20 ರಂದು ನಾಲ್ಕನೇ ಹಂತದ ಮತದಾನ
ಮೇ 25 ರಂದು ಐದನೇ ಹಂತದ ಮತದಾನ
ಮೇ 25 ರಂದು ಐದನೇ ಹಂತದ ಮತದಾನ
ಜೂನ್ 1 ರಂದು ಐದನೇ ಹಂತದ ಮತದಾನ
ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟ