ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಮತ್ತು ಸಿಬ್ಬಂದಿಗೆ ಗ್ರಾಮ ಸ್ವರಾಜ್ ಪ್ರತಿಷ್ಠಾನ ಹಾಗೂ ಸ್ಥಳೀಯ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಾ.2 ರಂದು ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ‘ಹೊಂಬೆಳಕು’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9 ಗೆಂಟೆಗೆ ಆಕರ್ಷಕ ಪಥ ಸಂಚಲನ ನಡೆಯಲಿದ್ದು, ಅತ್ಯುತ್ತಮ ನಿರ್ವಹಣೆ ತೋರುವ ತಂಡಗಳಿಗೆ ಮೊದಲ ಬಹುಮಾನವಾಗಿ ₹ 50 ಸಾವಿರ, ಎರಡನೇ ಬಹುಮಾನವಾಗಿ ₹ 25 ಸಾವಿರ ಹಾಗೂ ಮೂರನೇ ಬಹುಮಾನವಾಗಿ ₹ 10 ಸಾವಿರ ವಿತರಿಸಲಾಗುವುದು. ಪಥಸಂಚಲನದ ವೇಳೆ ಉಭಯ ಜಿಲ್ಲೆಗಳ ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಭಾಗವಹಿಸುವ ಸ್ಪರ್ಧೆಗಳೂ ಇರಲಿವೆ. ಗುಂಪು ಹಾಗೂ ವೈಯುಕ್ತಿಕ ವಿಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳಿದ್ದು, ವಿವಿಧ ಮನೊರಂಜನೆ ಕಾರ್ಯಕ್ರಮಗಳು ನಡೆಯಲಿವೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಭಾಗವಹಿಸುವ ಸಂಸ್ಥೆಗಳಿಗೆ ಸ್ಮರಣಿಗೆ ನೀಡಿ ಗೌರವಹಿಸಲಾಗುವುದು. ಸಂಸ್ಥೆಗಳಿಗೆ ಫೆ.28 ರಂದು ನೋಂದಾಯಿಸಲು ಅವಕಾಶವಿದ್ದು, ಬಳಿಕದ ನೋಂದಣಿಯನ್ನು ಪರಿಗಣಿಸುವುದಿಲ್ಲ ಎಂದು ಗ್ರಾಮ ಸ್ವರಾಜ್ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ.) ಪರಿಚಯ: ಸ್ಥಳೀಯ ಸಂಸ್ಥೆಗಳಾದ ಪಂಚಾಯತ್ ಹಾಗೂ ನಗರಾಡಳಿತಗಳ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳ ಸರ್ವಾಂಗೀಣ ಅಭಿವೃದ್ಧಿ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದು, ಸ್ವ-ಉದ್ಯೋಗ ಹಾಗೂ ಆರ್ಥಿಕ ಸ್ವವಲಂಬನೆಗೆ ಪ್ರೋತ್ಸಾಹ ನೀಡುವುದು, ಸರಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ನೆರವಾಗುವುದು ಈ ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿದೆ.
ಗ್ರಾಮ ಸ್ವರಾಜ್ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಅಧ್ಯಕ್ಷರಾಗಿ ಕೆ.ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿಯಾಗಿ ಲಾರೆನ್ಸ್ ಡಿ’ಸೋಜ, ಖಜಾಂಜಿಯಾಗಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
Sahyadri College Panchayati raj