ದೆಹಲಿ: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ತಡೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಮಾ.19 ರಂದು ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಸಿಎಎ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ 2019 ರಿಂದ ಸುಪ್ರೀಂಕೋರ್ಟ್ನಲ್ಲಿ 200ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಕುರಿತು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಪ್ರಸ್ತಾಪಿಸಿದ್ದು, ಅರ್ಜಿಗಳನ್ನು ಮುಂದಿನ ವಾರ ವಿಚಾರಣೆ ನಡೆಸಲಾಗುವುದು ಎಂದು ಸಿಜೆಐ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಕಾನೂನಿನಂತೆ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ಡಿಸೆಂಬರ್ 31, 2014ಕ್ಕಿಂತ ಮುಂಚೆ ಭಾರತಕ್ಕೆ ವಲಸೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಹಿಂದೂ ಸಿಖ್, ಜೈನ, ಕ್ರೈಸ್ತ ಬೌದ್ಧ ಮತ್ತು ಪಾರ್ಸಿ ಸಮುದಾಯದ ಮಂದಿಗೆ ಭಾರತದ ಪೌರತ್ವ ನೀಡಬಹುದಾಗಿದೆ.
2019ರ ಡಿಸೆಂಬರ್ ನಲ್ಲಿ ಅಂಗೀಕಾರಗೊಂಡಿದ್ದ ಈ ಕಾನೂನಿಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಆದರೆ ದೇಶದಾದ್ಯಂತ ತೀವ್ರ ಪ್ರತಿಭಟನೆಗಳು ನಡೆದ ಕಾರಣ ಜಾರಿಗೆ ಅಧಿಸೂಚನೆ ಹೊರಡಿಸಿರಲಿಲ್ಲ. ಬಿಜೆಪಿಯೇತರ ರಾಜ್ಯಗಳಲ್ಲಿ ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆದಿತ್ತು. ಪ್ರತಿಭಟನೆಯಲ್ಲಿ ಕನಿಷ್ಠ 100 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಇತ್ತೀಚಿಗೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.