ಬೆಂಗಳೂರು: ಕಳೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎನ್ನಲಾದ ಶೇ.40 ಕಮಿಷನ್ ವಿರುದ್ಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶುಕ್ರವಾರ ಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಕೊಡಿಸುವಲ್ಲಿ ಮಂಗಳೂರು ಮೂಲದ ಹೈಕೋರ್ಟ್ ವಕೀಲ ನಿಶಿತ್ ಕುಮಾರ್ ಶೆಟ್ಟಿ ಯಶಸ್ವಿಯಾಗಿದ್ದಾರೆ.
“ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ ಸರ್ಕಾರ. ಕಳೆದ ನಾಲ್ಕು ವರ್ಷಗಳಲ್ಲಿ ರೂ.1.50 ಲಕ್ಷ ಕೋಟಿ ಲೂಟಿ ಹೊಡೆದಿರುವ ‘ಭ್ರಷ್ಟ ಸರ್ಕಾರ” ಎಂದು 2023ರ ಮೇ 5ರಂದು ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖ ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿತ್ತು.
ಈ ಜಾಹೀರಾತು ಮಾನಹಾನಿಕರ ಎಂದು ಆರೋಪಿಸಿ ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಸ್.ಕೇಶವಪ್ರಸಾದ್ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಕೂಡ ಸಹ ಆರೋಪಿಗಳಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಜೂ.1ರಂದು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾಗಿದ್ದರು. ಆದರೆ, ರಾಹುಲ್ ಗಾಂಧಿ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿರುವುದರಿಂದ ತಮಗೆ ವಿಚಾರಣೆಯಿಂದ ಕೆಲ ದಿನಗಳವರೆಗೆ ವಿನಾಯಿತಿ ಕೊಡಬೇಕೆಂದು ರಾಹುಲ್ ಗಾಂಧಿ ಪರ ವಕೀಲ ನಿಶಿತ್ ಕುಮಾರ್ ಶೆಟ್ಟಿವುಳ್ಳ ತಂಡ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹಾಗಾಗಿ, ಅವರ ವಿಚಾರಣೆ ಜೂ. 7ಕ್ಕೆ ಮುಂದೂಡಲ್ಪಟ್ಟಿತ್ತು. ಅದರಂತೆ ರಾಹುಲ್ ಗಾಂಧಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ರಾಹುಲ್ ಗಾಂಧಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ವಿಚಾರಣೆಯ ವೇಳೆ ಕಳೆದ ಬಾರಿ ರಾಹುಲ್ ಗಾಂಧಿ ಕೋರ್ಟ್ಗೆ ಆಗಮಿಸದಕ್ಕೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕೋರ್ಟ್ ಮುಂದೆ ಎಲ್ಲರೂ ಸಮಾನರು. ನ್ಯಾಯಾಲಯ ಸೂಚಿಸಿದಾಗ ಆರೋಪಿಗಳು ಬರಬೇಕು. ಈಗಾಗಲೇ ಎರಡು ಬಾರಿ ವಿನಾಯಿತಿ ನೀಡಲಾಗಿದೆ. ಮತ್ತೆ ನೀಡಲು ಅವಕಾಶವಿಲ್ಲ ಎಂದು ಕೋರ್ಟ್ಗೆ ತಿಳಿಸಿದ್ದರು.
ಆ ಬಳಿಕ ರಾಹುಲ್ ಗಾಂಧಿ ಪರ ಮಂಗಳೂರು ಮೂಲದ ನಿಶಿತ್ ಕುಮಾರ್ ಶೆಟ್ಟಿವುಳ್ಳ ಹೈಕೋರ್ಟ್ ವಕೀಲರ ತಂಡ ವಾದಿಸಿತು. ನಂತರ ಸಿಆರ್‌ಪಿಸಿ 205ರ ಅಡಿಯಲ್ಲಿನ ಅರ್ಜಿಯನ್ನು ಮಾನ್ಯ ಮಾಡಿ ಕೋರ್ಟ್ ಹಾಜರಿಗೆ ವಿನಾಯಿತಿ ನೀಡಿದೆ. ಆ ಮೂಲಕ ಕಾಂಗ್ರೆಸ್ ಅಧಿನಾಯಕ ಎಂದು ಕರೆಸಿಕೊಳ್ಳುವ ರಾಹುಲ್ ಗಾಂಧಿ ಅವರನ್ನು ನ್ಯಾಯಾಂಗ ಬಂಧನದಿಂದ ಆಗುವ ಸಾಧ್ಯತೆಗಳಿಂದಲೂ ವಕೀಲರ ತಂಡ ಪಾರು ಮಾಡಿದೆ.