ಚಿತ್ರದುರ್ಗ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ವಕೀಲ ಮತ್ತು ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಜಿಲ್ಲೆಯ ಹಿರಿಯೂರು ಗ್ರಾಮಾಂತರ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ಕಾರಿನಲ್ಲಿ ಬರುತ್ತಿದ್ದ ದೇವರಾಜೇಗೌಡ ಅವರನ್ನು ಖಚಿತ ಮಾಹಿತಿಯ ಮೇರೆಗೆ ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ಹಿರಿಯೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಹಾಸನಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.
ಸೈಟ್ ಮಾರಾಟಕ್ಕೆ ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹಾಸನ ಜಿಲ್ಲೆಯ 36 ವರ್ಷದ ಮಹಿಳೆಯೊಬ್ಬರು ವಕೀಲ ದೇವರಾಜೆಗೌಡ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಎಪ್ರಿಲ್ 1 ರಂದು ಪ್ರಕರಣ ದಾಖಲಾಗಿತ್ತು.
ದೇವರಾಜೆಗೌಡ ನನಗೆ ವೀಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ. ವೀಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ. ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಿಕೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ದೇವರಾಜೇಗೌಡ, ಹಾಸನದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೇ 8 ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿತ್ತು. ಈ ಮಧ್ಯೆ ದೇವರಾಜೇಗೌಡರು, ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ಹನಿ ಟ್ರ್ಯಾಪ್ ಆರೋಪದಲ್ಲಿ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.