ಬಿ.ಕೆ. ಹರಿಪ್ರಸಾದ್ ಬೆಂಗಳೂರು: ‘ಮನ್ಸ’ ಸಮಾಜದವರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ‘ಮನ್ಸ’ ಎಂಬ ಉಪಜಾತಿಯ ಕೆಳಗೆ ಪ್ರತ್ಯೇಕವಾಗಿ ನಮೂದಿಸಬೇಕು ಮತ್ತು ಈ ಸಂಬಂಧ ತಿದ್ದುಪಡಿ ಆದೇಶ ಹೊರಡಿಸಲು ಕ್ರಮಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, “ರಾಜ್ಯದ ಕರಾವಳಿ ಭಾಗದಲ್ಲಿರುವ ಮನ್ನ ಸಮಾಜವು ಅತ್ಯಂತ ಆರ್ಥಿಕ ದುಸ್ಥಿತಿಯಲ್ಲಿರುವ, ಸಮಾಜದ ಕಟ್ಟ ಕಡೆಯ ನಿರ್ಲಕ್ಷ್ಯಕ್ಕೊಳಪಟ್ಟ ಸಮಾಜವಾಗಿದ್ದು, ತಮ್ಮ ಪೂರ್ವಿಕರಾಧಿಯಾಗಿ ಜೀತಪದ್ಧತಿಯಲ್ಲಿ ನೊಂದು ಬೆಂದವರಾಗಿದ್ದಾರೆ. ವ್ಯವಸಾಯ ಮಾಡುವುದಕ್ಕೆ ಕೀಳು ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ನಿಷೇಧಕ್ಕೆ ಒಳಗಾಗಿದ್ದರು. ಗೇಣು ಭೂಮಿಯು ಇಲ್ಲದ, ಅತ್ಯಂತ ಬಡತನದ, ಹಸಿವನ್ನು ನುಂಗಿದ, ದುಡಿದ ಕೂಲಿಗೆ ಕಾಸೂ ಇಲ್ಲದ ಅತ್ಯಂತ ನಿಕೃಷ್ಟವಾಗಿ ಕಾಣಲ್ಪಟ್ಟ ಸಮಾಜ ಇವರದ್ದಾಗಿದೆ.
ಶಿವರಾಮ ಕಾರಂತರ ಚೋಮನದುಡಿ ಕಾದಂಬರಿ
ಈ ಸಮಾಜ ಅನುಭವಿಸುವ ಕಷ್ಟ ಮತ್ತು ನೋವುಗಳ ಸಂಪೂರ್ಣ ಚಿತ್ರಣವನ್ನು ಮಾನ್ಯ ಜ್ಞಾನಪೀಠ ಪುರಸ್ಕೃತರಾದ ಕೆ.ಶಿವರಾಮ ಕಾರಂತರವರು ತಮ್ಮ ಚೋಮನದುಡಿ ಕಾದಂಬರಿಯಲ್ಲಿ ಮನಮುಟ್ಟುವಂತೆ ವರ್ಣಿಸಿದ್ದಾರೆ” ಎಂದು ವಿವರಿಸಿದರು.
“ಸಮಾಜದ ಕೆಳಸ್ತರದಲ್ಲಿರುವ ಮನ್ಸರು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ವಂಚಿತರಾಗಿದ್ದಾರೆ. ಇಂತಹ ನಿರ್ಲಕ್ಷಿತ ಸಮಾಜವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದ್ದು, ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು” ಎಂದು ಸರಕಾರವನ್ನು ಆಗ್ರಹಿಸಿದರು.