ಕೊಡಗು: ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿಯ ಮುಟ್ಲಗಿ ಗ್ರಾಮದಲ್ಲಿ SSLC ಪಾಸಾದ ವಿದ್ಯಾರ್ಥಿನಿಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್ (32) ಪರಾರಿಯಾಗಿದ್ದಾನೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಕಾಶ್ ತಲೆ ಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಕೊಡಗು ಎಸ್‌ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಘಟನೆ ವಿವರ: ಸೂರ್ಲಬ್ಬಿ ಪ್ರೌಢ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದ ಮೀನಾ (16) ಹತ್ಯೆಗೀಡಾದ ಬಾಲಕಿ. ಗುರುವಾರ ಪ್ರಕಟವಾದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೀನಾ ಉತ್ತೀರ್ಣಳಾಗಿದ್ದಳು. ಈ ಸಂತೋಷದ ನಡುವೆಯೇ ಮನೆಯವರು ಈಕೆಯ ವಿವಾಹಕ್ಕೆಂದು ಅದೇ ಗ್ರಾಮದ ಪ್ರಕಾಶ್ ನೊಂದಿಗೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಲು ನಿಶ್ಚಿಯಿಸಿದರು. ಇದರಿಂದ ಕುಪಿತಗೊಂಡ ಪ್ರಕಾಶ್ ಸಂಜೆ ವೇಳೆಗೆ ಮೀನಾಳ ಮನೆಗೆ ಬಂದು ಆಕೆಯ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಮೀನಾಳನ್ನು ಎಳೆದೊಯ್ದು ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾನೆ.