Friday, April 18, 2025

ಮಂಗಳೂರು: ನ.15ರಂದು ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ

by eesamachara
0 comment

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಸಂಯುಕ್ತ ಆಶ್ರಯದಲ್ಲಿ  ಪಂಚಾಯತ್ ರಾಜ್ ಪ್ರತಿನಿಧಿಗಳ “ಜಿಲ್ಲಾ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮ” ನ.15ರಂದು ಬೆಳಗ್ಗೆ 10:30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್‌ ರಾಜ್ ಸಂಘಟನೆಯ ಘಟಕಾಧ್ಯಕ್ಷ ಸುಭಾಷ್ ಶೆಟ್ಟಿ ಕೊಳ್ನಾಡ್ ತಿಳಿಸಿದ್ದಾರೆ.

ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಉದ್ಘಾಟಿಸಿ ಪಂಚಾಯತ್ ಪ್ರತಿನಿಧಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌, ಕರ್ನಾಟಕ ಪ್ರದೇಶ ಕಾಂಗ್ರೆಸ್ ಆರ್.ಜಿ.ಪಿ.ಆರ್‌.ಎಸ್‌ನ ಸಂಚಾಲಕ ವಿಜಯ್ ಸಿಂಗ್, ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಮಾಜಿ ಸಚಿವ ಬಿ. ರಮಾನಾಥ ಸೇರಿಂದತೆ ಮಾಜಿ ಶಾಸಕರು ಉಪಸ್ಥಿತಲಿರುವರು. ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಪ್ರಸ್ತಾವಿಕ ಮಾತನಾಡಿಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರು ಪಂಚಾಯತ್‌ರಾಜ್‌ ವ್ಯವಸ್ಥೆಗೆ ಕಾನೂನು ರೂಪಿಸಿ 30 ವರ್ಷ ತುಂಬಿದ ಸವಿನೆನಪಿನ ಹಿನ್ನೆಲೆಯಲ್ಲಿ ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಸುದರ್ಶನ ಅವರು “ಪಂಚಾಯತ್ ರಾಜ್ ಅಧಿನಿಯಮದ” ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಇದೇ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪಕ್ಷ ಸಂಘಟನೆಯ ಉದ್ದೇಶದಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂಪಿಸಿರುವ ಹೊಸ ಪಂಚಾಯತ್ ರಾಜ್ ಕಾರ್ಯಪಡೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿನ ಕುಂದುಕೊರತೆಗಳನ್ನು ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳ ತಲಾ ಒಬ್ಬ ಗ್ರಾಮ ಪಂಚಾಯತ್ ಪ್ರತಿನಿಧಿ, ತಾ.ಪಂ.ನ ಓರ್ವ ಮಾಜಿ ಅಧ್ಯಕ್ಷ ಮತ್ತು ಜಿ.ಪಂ.ನ ಓರ್ವ ಮಾಜಿ ಅಧ್ಯಕ್ಷ ಪಂಚಾಯತ್ ರಾಜ್ ಬಗ್ಗೆ ಅಭಿಪ್ರಾಯ ಮಂಡಿಸಲಿದ್ದಾರೆ ಎಂದರು.

ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಗೆ ತಿದ್ದುಪಡಿ ತಂದು ಸಾಮಾಜಿಕ ನ್ಯಾಯ ಒದಗಿಸುವ ಕೊಡುವ ಮತ್ತು ಸ್ಥಳೀಯ ಸಂಸ್ಥೆಗೆ ಶಕ್ತಿ ನೀಡಿದರು. ಬಳಿಕ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಆರ್ಥಿಕ ಬಲ ನೀಡುವ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿತು. ರಾಜ್ಯದಲ್ಲಿ ಎಸ್ಎಂ ಕೃಷ್ಣ, ಸಿದ್ದರಾಮಯ್ಯ ನೇತೃತ್ವದ ಸರಕಾರ ವಿವಿಧ ಇಲಾಖೆಗಳನ್ನು ವ್ಯಾಪ್ತಿಗೆ ತಂದು ಪಂಚಾಯತ್ ವ್ಯವಸ್ಥೆಗೆ ಆರ್ಥಿಕ ಬಲ ಮತ್ತು ಅಧಿಕಾರವನ್ನು ನೀಡಿತ್ತು. ಬಳಿಕ ಬಂದ ಬಿಜೆಪಿ ಸರಕಾರ ಹಂತ ಹಂತವಾಗಿ ಅಧಿಕಾರವನ್ನು ಕಿತ್ತುಕೊಂಡು ವಿಕೇಂದ್ರಿಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೇಂದ್ರಿಕರಣ ವ್ಯವಸ್ಥೆಗೆ ಒತ್ತು ನೀಡಿತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮ.ನ.ಪಾ ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮನ್ ಬಂಟ್ವಾಳ್, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ, ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕದ ಅಧ್ಯಕ್ಷರಾದ ವಿಸ್ವಾಶ್ ಕುಮಾರ್ ದಾಸ್, ಲಾರೆನ್ಸ್ ಡಿ ಸೋಜಾ, ಬಿ.ಎಂ ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ, ಮುಖಂಡರಾದ ಗಿರೀಶ್ ಶೆಟ್ಟಿ, ಗಣೇಶ್ ಪೂಜಾರಿ, ಅಬ್ದುಲ್ ರಝಕ್ ಕುಕ್ಕಾಜೆ, ಹೈದರ್ ಕೈರಂಗಳ, ಜಗದೀಶ್ ಕೊಯಿಲ, ವೃಂದ ಪೂಜಾರಿ ಉಪಸ್ಥಿತರಿದ್ದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios