ಬೆಳ್ತಂಗಡಿ: ಇತ್ತೀಚಿಗೆ ತುಮಕೂರಿನಲ್ಲಿ ಭೀಕರವಾಗಿ ಹತ್ಯಗೀಡಾದ ಬೆಳ್ತಂಗಡಿ ತಾಲೂಕಿನ ಮೂವರು ವ್ಯಕ್ತಿಗಳ ಮನೆಗಳಿಗೆ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಸೋಮವಾರ ಭೇಟಿ ನೀಡಿದರು.
ಇಂದು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಮದ್ದಡ್ಕದ ಇಸಾಕ್ ಮನೆಗೆ, ಶಿರ್ಲಾಲಿನ ಇಮ್ಮಿಯಾಜ್ ಯಾನೆ ಸಿದ್ದಿಕ್ ಮನೆಗೆ, ಉಜಿರೆಯ ಶಾಹುಲ್ ಹಮೀದ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರುಗಳೊಂದಿಗೆ ಮಾತನಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ ಖಾದರ್, ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಪ್ರಕರಣದ ಗೃಹ ಸಚಿವರೊಂದಿಗೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮೃತದೇಹಗಳ ಡಿ.ಎನ್.ಎ ಪರೀಕ್ಷೆ ನಡೆಸಿ ಸಾಧ್ಯವಾದಷ್ಟು ವೇಗವಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲು ಕೋರಿದ್ದೇನೆ. ಪೊಲೀಸರು ಕಾನೂನು ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಂಡು ಬಳಿಕ ಮೃತದೇಹಗಳನ್ನು ಹಸ್ತಾಂತರಿಸಲಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶಾಹುಲ್ ಹಮೀದ್, ಧರಣೇಂದ್ರ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಮತ್ತಿತರರಿದ್ದರು.

