ತುಮಕೂರು: ಬೋರ್ವೆಲ್ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮರತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿ ಚಿಗಣಿಪಾಳ್ಯ ಬಳಿ ರಾಜ್ಯ ಹೆದ್ದಾರಿ 33ರಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಮಂಗಳೂರಿನ ಬಜ್ಪೆ ಮೂಲದ ಕಿಶನ್ ಶೆಟ್ಟಿ (20) ಹಾಗೂ ಫೀಲಿಪ್ ನೇರಿ (32) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಕಿಶನ್ ಶೆಟ್ಟಿ ಮಂಗಳೂರಿನ ಪರೆರಾರ ಬಜಪ್ಪೆ ಗ್ರಾಮದ ನಿವಾಸಿಯಾfಗಿದ್ದು, ಫೀಲೀಪ್ ನೇರಿ ಭಟ್ಟರ ತೋಟದ ಗ್ರಾಮದ ವಾಸಿಗಳಾಗಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಬೆಂಗಳೂರು ಕಂಬಳವನ್ನು ನೋಡಿಕೊಂಡು ಮಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ರಾತ್ರಿ 1:15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರು ನೆಲಮಂಗಲ ಹಾಗೂ ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೆ ದಾರಿತಪ್ಪಿ ತುಮಕೂರಿಗೆ ಹೋಗಿದ್ದಾರೆ. ಬಳಿಕ ಅಲ್ಲಿಂದ ಹೆಬ್ಬರು ಮಾರ್ಗವಾಗಿ ಕುಣಿಗಲ್ ನಿಂದ ಮಂಗಳೂರಿಗೆ ತೆರಳುತ್ತಿರ ಬೇಕಾದರೆ ಇವರು ಸಂಚರಿಸುತ್ತಿದ್ದ ಕಾರಿಗೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಿತೀಶ್ ಭಡಾರಿ, ಪ್ರೀತಿ ಲೋಬೋ, ಹರೀಶ್ ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುಣಿಗಲ್ ಠಾಣೆ ಪೊಲೀಸರು ಲಾರಿ ಹಾಗೂ ಅದರ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.