ಹೊಸದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಮೋದಿ ಪರವಾಗಿ ಘೋಷಣೆ ಕೂಗಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೀಡಿಯೋದಲ್ಲಿ ಏನಿದೆ?: ರಿಷಿ ಬಾಗ್ರೀ ಎಂಬವರು “ರಾಜಸ್ಥಾನದ ಸಾರ್ವಜನಿಕರು ಮೋದಿ-ಮೋದಿ ಘೋಷಣೆಗಳೊಂದಿಗೆ ಸಿಎಂ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಸಿಎಂ ಗೆಹ್ಲೋಟ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಜನಸಮೂಹವು ‘ಮೋದಿ ಮೋದಿ’ ಎಂದು ಘೋಷಣೆ ಮಾಡುತ್ತಿರುವುದು ಕೇಳಿಸುತ್ತದೆ. ಅನೇಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಇದೇ ವಿಡಿಯೊ ಹಂಚಿಕೊಂಡು ಗೆಹ್ಲೋಟ್ ಚುನಾವಣಾ ರ್ಯಾಲಿಯಲ್ಲಿ ಮೊಳಗಿದ ಮೋದಿ ಪರ ಘೋಷಣೆ ಎಂಬ ಒಕ್ಕಣೆ ನೀಡಿದ್ದಾರೆ. ಇದು ಸುಳ್ಳು ಎಂದು ಎಬಿಪಿ ಲೈವ್ ಪ್ರಸಾರ ಮಾಡಿದೆ.
ಫ್ಯಾಕ್ಟ್ ಚೆಕ್: ವೈರಲ್ ಆದ ಈ ವೀಡಿಯೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಎಬಿಪಿ ಲೈವ್, ಈ ವೀಡಿಯೊ ಎಡಿಟ್ ಮಾಡಲಾಗಿದ್ದು, ಗೆಹ್ಲೋಟ್ ಭಾಷಣ ವೇಳೆ ಮೋದಿ ಪರ ಘೋಷಣೆ ಕೂಗಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ವೈರಲ್ ವೀಡಿಯೊದ ಕೀಫ್ರೇಮ್ ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವಿಡಿಯೊ ತುಣುಕು ನವೆಂಬರ್ 22 ರಂದು ಗೆಹ್ಲೋಟ್ ಮಾಡಿದ ಭಾಷಣ ಎಂಬುದು ಬಯಲಾಗಿದೆ. ಅಶೋಕ್ ಗೆಹ್ಲೋಟ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅವರ ಭಾಷಣದ ದೀರ್ಘ ಆವೃತ್ತಿ ಇದ್ದು, ವೀಡಿಯೊ ಶೀರ್ಷಿಕೆ ಮತ್ತು ವಿವರಣೆಯ ಪ್ರಕಾರ, ರಾಜಸ್ಥಾನದ ಟೋಂಕ್ ಜಿಲ್ಲೆಯ ಮಾಲ್ಪುರದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಮಾಲ್ಪುರದ ಕಾಂಗ್ರೆಸ್ ಅಭ್ಯರ್ಥಿ ಘಾಸಿಲಾಲ್ ಚೌಧರಿ ಅವರನ್ನು ಬೆಂಬಲಿಸಲು ಗೆಹ್ಲೋಟ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ರ್ಯಾಲಿಯಲ್ಲಿ ರಾಜ್ಯಸಭಾ ಸಂಸದ ದೀಪೇಂದ್ರ ಸಿಂಗ್ ಹೂಡಾ ಕೂಡ ಉಪಸ್ಥಿತರಿದ್ದರು.
2:15 ಟೈಮ್‌ಸ್ಟ್ಯಾಂಪ್ ನಲ್ಲಿ ವೈರಲ್ ಕ್ಲಿಪ್‌ನ ದೃಶ್ಯವನ್ನು ಕಾಣಬಹುದು ಇಲ್ಲಿ, ಪ್ರತಿ ಕುಟುಂಬದ ಮಹಿಳೆಗೆ ವಾರ್ಷಿಕ ₹ 10,000 ನೀಡುವ ಕಾಂಗ್ರೆಸ್‌ನ ಭರವಸೆಯ ಬಗ್ಗೆ ಗೆಹ್ಲೋಟ್ ಮಾತನಾಡುತ್ತಿದ್ದಾರೆ. ವೇದಿಕೆಯಲ್ಲಿ ಅವರ ಪಕ್ಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘಾಸಿಲಾಲ್ ಚೌಧರಿ ನಿಂತಿದ್ದಾರೆ. ಆದರೆ ವೀಡಿಯೊದಲ್ಲಿ ಎಲ್ಲಿಯೂ ಮೋದಿ ಪರ ಘೋಷಣೆ ಕೇಳಿಲ್ಲ.
ಗೆಹ್ಲೋಟ್ ಮಾತನಾಡುತ್ತಿದ್ದಂತೆ ಕೆಲವರು (ಫ್ರೇಮ್‌ನಲ್ಲಿ ಕಾಣಿಸದ) ಬಹುಶಃ ಕಿರುಚುತ್ತಿದ್ದರು ಎಂದು ವೀಡಿಯೊ ತೋರಿಸುತ್ತದೆ. ಕೂಗಾಟದಿಂದ ವಿಚಲಿತರಾದ ಗೆಹ್ಲೋಟ್ “ಅವರು ಯಾರು “ನೀವು ಅವನ ಬೆಂಬಲಕ್ಕೆ ಬಂದಿದ್ದೀರಾ ಅಥವಾ ಇಲ್ಲವೇ? ಎಂದು ಕೇಳುತ್ತಾ ಅವರಿಗೂ ಕುಳಿತುಕೊಳ್ಳುವಂತೆ ಸೂಚಿಸುತ್ತಾರೆ. ಅವರ ಪಕ್ಕದಲ್ಲಿ, ಚೌಧರಿ ಕೂಡ ತನ್ನ ಕೈಯಿಂದ ಸನ್ನೆ ಮಾಡಿ, ಜನರಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡುತ್ತಾರೆ. ಆದರೆ, ‘ಮೋದಿ ಮೋದಿ’ ಘೋಷಣೆಗಳು ಕೇಳಿಸಲಿಲ್ಲ.
ಗೆಹ್ಲೋಟ್ ರ್ಯಾಲಿಯ ಲೈವ್‌ಸ್ಟ್ರೀಮ್ ಅನ್ನು ನವೆಂಬರ್ 22 ರಂದು ಕಾಂಗ್ರೆಸ್ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ‘INC TV’ ನಲ್ಲಿ ಸಹ ಹಂಚಿಕೊಳ್ಳಲಾಗಿದೆ. ಈಗ ವೈರಲ್ ಕ್ಲಿಪ್ ಸುಮಾರು 2:40 ಟೈಮ್‌ಸ್ಟ್ಯಾಂಪ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲೂ ಕೂಡ ನರೇಂದ್ರ ಮೋದಿ ಪರ ಘೋಷಣೆಗಳು ಕೇಳಿ ಬಂದಿಲ್ಲ ಎಂದು ತಿಳಿದು ಬಂದಿದೆ.