ನವದೆಹಲಿ: ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ಪ್ರದರ್ಶನ ನೀಡುವುದನ್ನು ಅಥವಾ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, “ಈ ಮನವಿ ಸ್ವೀಕಾರಾರ್ಹವಲ್ಲ, ಅಷ್ಟು ಸಂಕುಚಿತ ಮನೋಭಾವ ಇರಬಾರದು” ಎಂದು ಅರ್ಜಿದಾರರಿಗೆ ಮನವರಿಕೆ ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್ ಭಟ್ಟಿ ಅವರ ಪೀಠವು ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಒಲವು ಹೊಂದಿಲ್ಲ ಎಂದು ಹೇಳಿದ್ದು, ಸಿನಿಮಾ ಕಲಾವಿದರು ಮತ್ತು ಕಲಾವಿದ ಎಂದು ಹೇಳಿಕೊಳ್ಳುವ ಫೈಝ್ ಅನ್ವರ್ ಖುರೇಷಿ ಸಲ್ಲಿಸಿದ ಮನವಿಯನ್ನು ರದ್ದುಗೊಳಿಸಿತು.
“ದೇಶಭಕ್ತರಾಗಲು, ಒಬ್ಬರು ವಿದೇಶದಿಂದ ವಿಶೇಷವಾಗಿ ನೆರೆಹೊರೆಯವರೊಂದಿಗೆ ದ್ವೇಷ ಸಾಧಿಸುವ ಅಗತ್ಯವಿಲ್ಲ ಎಂದು ಒಬ್ಬರು ಅರ್ಥಮಾಡಿಕೊಳ್ಳಬೇಕು. ನಿಜವಾದ ದೇಶಪ್ರೇಮಿ ಎಂದರೆ ನಿಸ್ವಾರ್ಥ, ದೇಶಕ್ಕಾಗಿ ಮುಡಿಪಾಗಿರುವ ವ್ಯಕ್ತಿ, ಅವನು ಒಳ್ಳೆಯ ಹೃದಯದ ವ್ಯಕ್ತಿಯಾಬೇಕು. ಹೃದಯವಂತ ವ್ಯಕ್ತಿಯು ತನ್ನ ದೇಶದಲ್ಲಿ ಯಾವುದೇ ಚಟುವಟಿಕೆಯನ್ನು ಸ್ವಾಗತಿಸುತ್ತಾನೆ. ಇದು ದೇಶದೊಳಗೆ ಮತ್ತು ಗಡಿಯುದ್ದಕ್ಕೂ ಶಾಂತಿ, ಸೌಹಾರ್ದತೆ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಕಲೆ, ಸಂಗೀತ, ಕ್ರೀಡೆ, ಸಂಸ್ಕೃತಿ, ನೃತ್ಯ ಹೀಗೆ ರಾಷ್ಟ್ರೀಯತೆಗಳು, ಸಂಸ್ಕೃತಿಗಳು ಮತ್ತು ರಾಷ್ಟ್ರಗಳನ್ನು ಮೀರಿದ ಚಟುವಟಿಕೆಗಳು ರಾಷ್ಟ್ರ ಮತ್ತು ರಾಷ್ಟ್ರಗಳ ನಡುವೆ ನಿಜವಾಗಿಯೂ ಶಾಂತಿ, ನೆಮ್ಮದಿ, ಏಕತೆ ಮತ್ತು ಸಾಮರಸ್ಯವನ್ನು ತರುತ್ತವೆ” ಎಂದು ಬಾಂಬೆ ಹೈಕೋರ್ಟ್ ಹಿಂದೆ ತನ್ನ ಆದೇಶದಲ್ಲಿ ಹೇಳಿತ್ತು. ಈ ತೀರ್ಪಿನ ವಿರುದ್ಧ ಅರ್ಜಿದಾರ ಫಾಯಿಝ್ ಅನ್ವರ್ ಖುರೇಷಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿತು.