ಪರಿಶಿಷ್ಟ ಜಾತಿಗಳ ಸಾಮಾಜಿಕ ಅಧ್ಯಯನ ನಡೆಸದೆ ಹಾಗೂ ಪ್ರಾಯೋಗಿಕ ಅಂಕಿ-ಅಂಶವಿಲ್ಲದೇ ಅವೈಜ್ಞಾನಿಕವಾಗಿ ಪರಿಶಿಷ್ಟ ಜಾತಿ ಒಳ ಮೀಸಲು ಹಂಚಿಕೆ ಮಾಡಿರುವುದರಿಂದ 89 ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಎಸ್ಸಿ-ಎಸ್ಟಿ ಮೀಸಲನ್ನು 4 ವಿಭಾಗಗಳಾಗಿ ಹಂಚಿಕೆ ಮಾಡಲಾಗಿದೆ. ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.5.5, ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6.5, ಸ್ಪ್ರಶ್ಯ ಜಾತಿಗಳಿಗೆ ಶೇ.4.5 ಹಾಗೂ ಆದಿವಾಸಿಗಳಿಗೆ, ಅಲೆಮಾರಿಗಳಿಗೆ ಸೇರಿದಂತೆ ಅತ್ಯಂತ ನಿಷ್ಕ್ರುಷ್ಠವಾದ 89 ಸಮುದಾಯಗಳಿಗೆ ಶೇ.1 ರಷ್ಟು ಮೀಸಲಾತಿ ನೀಡಲಾಗಿದೆ.
ಈ 89 ಸಮುದಾಯಗಳು ಅತ್ಯಂತ ಶೋಷಣೆಗೊಳಗಾಗಿದ್ದು, ಸರಕಾರದಿಂದಲೇ ತುಳಿಯುವ ಕೆಲಸವಾಗಿದೆ. ಮಾದಿಗ ಸಮುದಾಯದ 50 ಜಾತಿಗಳನ್ನು ಬೇರ್ಪಡಿಸಿ, ಹೊಲೆಯ ಸಮುದಾಯದಲ್ಲಿ 30 ಜಾತಿಗಳನ್ನು ಬೇರ್ಪಡಿಸಿ 89 ಸಣ್ಣ ಸಣ್ಣ ಜಾತಿಗಳನ್ನು ಒಂದು ಗುಂಪು ಮಾಡಲಾಗಿದೆ. ಸುಡುಗಾಡ ಸಿದ್ದ, ಸಿಳ್ಳೆಕ್ಯಾತ, ಹಂದಿ ಜೋಗಿ, ತಿರುಬುಂಡಿ, ಮುಕ್ರಿ ಸೇರಿದಂತೆ ಅನೇಕ ಸಣ್ಣ ಸಣ್ಣ ಜಾತಿಗಳ ಹೀನಾಯವಾಗಿ ಬದುಕುತ್ತಿದ್ದಾರೆ. ಹಲವರಿಗೆ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಇವರು ಎಲ್ಲಿ ವಾಸಿಸುತ್ತಿದ್ದಾರೆ. ಈ 89 ಸಮುದಾಯಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಕರ್ನಾಟಕ ಅಂಬೇಡ್ಕರ್ ಸಂಶೋಧನಾ ಕೇಂದ್ರದಿಂದ ಸಂಶೋಧನೆ ನಡೆಸಿ, ಪುಸ್ತಕ ಹೊರತರಲಾಗಿದೆ. ಇದ್ಯಾವುದನ್ನೂ ರಾಜ್ಯ ಸರಕಾರ ಪರಿಗಣನೆಗೆ ತೆಗೆದುಕೊಂಡಿಲ್ಲ. ಇತ್ತ ನ್ಯಾ. ಸದಾಶಿವ ಆಯೋಗದ ವರದಿಯನ್ನು ಸಂಪೂರ್ಣ ಜಾರಿಗೊಳಿಸಿಲ್ಲ.
ಜಾರಿ ಇಲ್ಲದ ಮೀಸಲು ಹಂಚಿಕೆ: ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚಳ ಮಾಡಿರುವ ಮೀಸಲು ಇನ್ನೂ ಜಾರಿಯಾಗಿಲ್ಲ. ಜಾರಿಯಾಗಿಲ್ಲದ ಮೀಸಲು ಸೇರಿಸಿಕೊಂಡು ಒಳ ಮೀಸಲು ಹಂಚಿಕೆ ಮಾಡಲಾಗಿದೆ. ಯಾವ ರೀತಿಯಿಂದಲೂ ಹೆಚ್ಚುವರಿ ಹಂಚಿಕೆ ಮಾಡಿರುವ ಮೀಸಲು ಜಾರಿಗೊಳಿಸಲು ಸಾಧ್ಯವಿಲ್ಲ.
ಈ ಹಿಂದೆ ಪರಿಶಿಷ್ಟ ಜಾತಿ ಶೇ.15 ರಷ್ಟು ಮೀಸಲು ಪಡೆಯುತಿತ್ತು. ಇದರಲ್ಲಿ ಪ್ರಸ್ತುತ ಶೇ.1 ರಷ್ಟು ಮೀಸಲು ಗುಂಪಿಗೆ ಸೇರಿಸಿರುವ 89 ಸಮುದಾಯಗಳು ಕನಿಷ್ಠ ಮಟ್ಟದಲ್ಲಾದರೂ ಮೀಸಲು ಸೌಲಭ್ಯ ಪಡೆದುಕೊಳ್ಳುತ್ತಿದ್ದರು. ಇದರಿಂದ ಸಾವಿರಕ್ಕೆ ಒಬ್ಬರಿಗಾದರೂ ಅನು ಕೂಲವಾಗುತ್ತಿತ್ತು. ಈಗ ಒಳಮೀಸಲು ಹಂಚಿಕೆ ಮಾಡುವ ಮೂಲಕ ಈ ತಬ್ಬಲಿ ಜಾತಿಗಳನ್ನು ಕತ್ತು ಹಿಸುಕುವ ಕೆಲಸ ಮಾಡ ಲಾಗಿದೆ. ಹಾಗಾಗಿ, ರಾಜ್ಯ ಸರಕಾರ ಪುನರ್ ವಿಂಗಡಣೆ ಮೀಸಲು ಆದೇಶ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸರಕಾರದ ಸ್ವಯಂಕೃತ ಅಪರಾಧದಿಂದ ಈ ಜನರ ಹಕ್ಕು ಕಸಿದುಕೊಂಡಂತಾಗುತ್ತದೆ.