ನವದೆಹಲಿ: 15 ವರ್ಷಗಳ ಹಿಂದೆ ನಡೆದಿದ್ದ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಅಪರಾಧಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಹಾಗೂ ಅಜಯ್ ಕುಮಾರ್ ಗೆ ಜೀವಾವಧಿ ಶಿಕ್ಷೆ ಮತ್ತು ತಲಾ 1.25 ಲಕ್ಷ ದಂಡ ವಿಧಿಸಿದರೆ, ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದ 5ನೇ ಅಪರಾಧಿ ಅಜಯ್ ಸೇಥಿಗೆ 3 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 7.25 ಲಕ್ಷ ದಂಡ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಆದೇಶಿಸಿದ್ದಾರೆ.
“ಅಪರಾಧವು ಅಪರೂಪದ ಪ್ರಕರಣಗಳ ವರ್ಗಕ್ಕೆ ಬರುವುದಿಲ್ಲ. ಹಾಗಾಗಿ ಮರಣದಂಡನೆಗೆ ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಅಪರಾಧಿಗಳಿಗೆ ವಿಧಿಸಲಾದ ಒಟ್ಟು ದಂಡದ ಮೊತ್ತದಲ್ಲಿ 12 ಲಕ್ಷಗಳನ್ನು ಸಂತ್ರಸ್ತೆಯ ಕುಟುಂಬಕ್ಕೆ ಪಾವತಿಸಬೇಕು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಟಿ.ವಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರು 2008ರ ಸೆಪ್ಟೆಂಬರ್ 30ರಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಈ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಐವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಸೌಮ್ಯಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಇದಾದ ಬಳಿಕ ಹಂತಕರು ತಮ್ಮ ಕೃತ್ಯ ಬಯಲಾಗದಂತೆ ಮಾಡಲು ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು. ಆರಂಭದಲ್ಲಿ ಕಾರು ದುರಂತ ಎಂಬಂತೆ ಕಂಡುಬಂದಿತ್ತು. ಆದರೆ, ವಿಧಿವಿಜ್ಞಾನ ವರದಿಗಳಲ್ಲಿ ಸೌಮ್ಯಾ ತಲೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿತ್ತು. ಇದರಿಂದ ಇದೊಂದು ಕೊಲೆ ಎಂದು ಸ್ಪಷ್ಟವಾಗಿ, ಇದರ ಆಧಾರದ ಮೇಲೆ ದೆಹಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.