ಉಡುಪಿ: ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಟಿಕೆಟ್ ಕೈತಪ್ಪಿದಕ್ಕೆ ಬುಧವಾರ ಕಣ್ಣೀರಿಟ್ಟಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ಪಕ್ಷದ ನಿರ್ಧಾರದ ಬಗ್ಗೆ ಬೇಸರವಿಲ್ಲ. ಆದರೆ, ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ. ಮೂರು ತಿಂಗಳ ಹಿಂದಯೇ ಜಾತಿಯ ಕಾರಣಕ್ಕೆ ಟಿಕೆಟ್ ಕೊಡಲ್ಲ ಎಂದ್ದಿದ್ದರೆ ಈಶ್ವರಪ್ಪ ಅವರಂತೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ. ಕೊನೆಯ ಕ್ಷಣದವರೆಗೂ 2 ಬ್ರಾಹ್ಮಣರಿಗೆ ಕೊಡುತ್ತೇವೆಂದು ನಾಯಕರು ಭರವಸೆ ನೀಡಿದ್ದರು. ಈ ಕ್ಷೇತ್ರವನ್ನು ಪ್ರಮಾಣಿಕವಾಗಿ ಕಟ್ಟಿದ್ದೇನೆ. ಟಿಕೆಟ್ ಸಿಗುವುದಿಲ್ಲವೆಂದು ಕನಸಿನಲ್ಲಿಯೂ ಎನಿಸಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ನಾನು ಯಾವ ಕಾರ್ಯಕರ್ತರನ್ನು ದಾರಿ ಮಧ್ಯೆ ಬಿಡಲ್ಲ. ನಾನು ಪಾರ್ಟಿಗೆ ಇಷ್ಟು ಬೇಡವಾದೆವೋ? ಅಮಿತ್ ಶಾ ಬೇಡ, ರಾಜ್ಯ ನಾಯಕರು ಅಥವಾ ಜಿಲ್ಲಾಧ್ಯಕ್ಷರು ಕರೆ ಮಾಡದೇ ಇರುವುದು ಬೇಸರ ತಂದಿದೆ” ಎಂದು ಹೇಳಿದರು.