ಬೆಂಗಳೂರು: ಈ ಬಾರಿಯ ನೈರುತ್ಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದು, ಶಿಕ್ಷಕರ ಸಂಘಟನೆ, ಪರಿಷತ್ ಚುನಾವಣೆ ಮೇಲೆ ಕಣ್ಣಿಟ್ಟು ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಪರ ಒಲವು ಹೆಚ್ಚಾಗಿದೆ.
ಜೂನ್ 3ರಂದು ಮತದಾನ ನಡೆಯಲಿದ್ದು, ವಿಧಾನ ಪರಿಷತ್ ಹಾಲಿ ಸದಸ್ಯ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಸ್.ಎಲ್. ಭೋಜೇಗೌಡ, ಕಾಂಗ್ರೆಸ್‌ನಿಂದ ಎರಡನೇ ಬಾರಿ ಕೆ.ಕೆ. ಮಂಜುನಾಥ ಕುಮಾರ್ ಕಣದಲ್ಲಿದ್ದಾರೆ. ಪಕ್ಷೇತರರಾಗಿ ಮಂಗಳೂರು ಬಿಜೆಪಿ ಬಂಡಾಯ ಅಭ್ಯರ್ಥಿ ಎಸ್.ಆರ್. ಹರೀಶ್ ಆಚಾರ್ಯ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬಿ.ಆರ್. ನಂಜೇಶ್, ಭಾಸ್ಕರ್ ಶೆಟ್ಟಿ, ನರೇಶ್ ಹೆಗಡೆ, ಅರುಣ್ ಎಚ್.ಡಿ., ಬಿ.ಆರ್. ನಂಜೇಶ್, ಮಂಜುನಾಥ್ ಕೆ.ಕೆ. ಸ್ಪರ್ಧಿಸುತ್ತಿದ್ದಾರೆ.
ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೇ.52 ರಷ್ಟು ಮತದಾರರು ಇದ್ದು, ಇಲ್ಲಿ ಮತದಾರರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ ಚಿಕ್ಕಮಗಳೂರಿನ ಭೋಜೇಗೌಡ, ಕೊಡಗಿನ ಮಂಜುನಾಥ್ ಕುಮಾರ್ ಈ ಭಾಗದ ಮತದಾರರನ್ನು ನೆಚ್ಚಿಕೊಂಡಿದ್ದಾರೆ.
ಈ ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಫರ್ನಾಂಡಿಸ್ ಗೆಲುವು ಸಾಧಿಸಿದ್ದರು. ಆ ನಂತರ ಬಿಜೆಪಿಯ ಬಾಲಕೃಷ್ಣ ಭಟ್, ಕ್ಯಾ.ಗಣೇಶ್ ಕಾರ್ಣಿಕ್ ತಲಾ ಎರಡು ಬಾರಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ, ಜೆಡಿಎಸ್ ಇಲ್ಲಿ ಮೊದಲ ಬಾರಿ ವಿಜಯ ಸಾಧಿಸಿತು. 2018ರ ಪರಿಷತ್ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಉಭಯ ಪಕ್ಷಗಳು ಆಗಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮಧ್ಯೆ ಮೈತ್ರಿ ಇರಲಿಲ್ಲ.
2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ಅವರನ್ನು ಭೋಜೇಗೌಡರು ಹಠಕ್ಕೆ ಬಿದ್ದು ಸೋಲಿಸಿರುವ ಒಳಬೇಗುದಿ ಆ ಜಿಲ್ಲೆಯಲ್ಲಿದೆ. ಮೇಲಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ಸೋಲಿಸಿರುವ ಅಸಮಾಧಾನವೂ ಬಿಜೆಪಿಗರಲ್ಲಿದೆ. ಹೀಗಾಗಿ ಬಿಜೆಪಿ ಬೆಂಬಲಿಗರು ಜೆಡಿಎಸ್ ಗೆ ಮತ ನೀಡಲಿಕ್ಕಿಲ್ಲ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.
ಕೊಡಗಿನ ಕೂಡೂರು ಗ್ರಾಮದ ಕೆ.ಕೆ. ಮಂಜುನಾಥ ಕುಮಾರ್, ಪ್ರೌಢಶಾಲಾ ಶಿಕ್ಷಕರಾಗಿದ್ದರು. ಶಿಕ್ಷಕರ ಸಂಘಟನೆ, ಸರ್ಕಾರಿ ನೌಕರರ ಸಂಘಟನೆಯಲ್ಲಿ ತೊಡಗಿದ್ದವರು. 2012ರ ಚುನಾವಣೆಯಲ್ಲಿ ಪಕ್ಷೇತರರಾಗಿ, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಪರಿಷತ್ ಚುನಾವಣೆ ಮೇಲೆ ಕಣ್ಣಿಟ್ಟು ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಅವರ ಬಲ ಹೆಚ್ಚಿಸಿದೆ. ಹೀಗಾಗಿ ಶಿಕ್ಷಕರು ಬೆಂಬಲ ಸೂಚಿಸಲು ಮುಂದಾಗಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಸಣ್ಣ ಪ್ರಮಾಣದ ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ವಿರುದ್ಧ ಸೋಲು ಕಂಡ ಮಂಜುನಾಥ್ ಅವರಿಗೆ ಈ ಬಾರಿ ಕಾಂಗ್ರೆಸ್ ಮತ್ತೆ ಅವಕಾಶ ನೀಡಿದೆ. ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಮಂಜುನಾಥ್ ನಿರಂತರ ಶಿಕ್ಷಕರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದು, ಅವರ ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಶಿಕ್ಷಕರ ಸಮಸ್ಯೆಗಳಿಗೆ ಮಂಜುನಾಥ್ ಮೂಲಕ ಪರಿಹಾರ ಸಿಗಲಿದೆ ಎಂದು ಶಿಕ್ಷಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಪಿಂಚಣಿ ಸಮಸ್ಯೆ, ಉಪನ್ಯಾಸಕರ ಹುದ್ದೆ ಭರ್ತಿ, ಖಾಸಗಿ ಶಿಕ್ಷಕರಿಗೆ ಸೇವಾ ಭದ್ರತೆ ಸೇರಿದಂತೆ ವಿವಿಧ ಸಮಸ್ಯೆಗಳು ಪರಿಹರಿಸುವ ಭರವಸೆ ಮಂಜುನಾಥ್ ಮೇಲೆ ಮೂಡಿದ್ದರಿಂದ ಶಿಕ್ಷಕರ ಬೆಂಬಲ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದ್ದು, ಈ ಬಾರಿ ಮಂಜುನಾಥ್ ಗೆಲುವಿಗೆ ಹೆಚ್ಚಿನ ಅವಕಾಶವಿದೆ ಎಂದು ಹೇಳಲಾಗುತ್ತಿದೆ.