ಮೈಸೂರು: ಇಂದು ಹೃದಯಾಘಾತದಿಂದ ನಿಧನ ಹೊಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನಾಳೆ (ಮಾ.12) ಮಧ್ಯಾಹ್ನ 2 ಗಂಟೆಗೆ ಹುಟ್ಟೂರು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಧ್ರುವನಾರಾಯಣ ಅಂತ್ಯಕ್ರಿಯೆ ನಡೆಯಲಿದೆ.
“ಮೈಸೂರಿನ ಅವರ ಮನೆ, ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಲ್ಲಿಂದ ಮೃತದೇಹವನ್ನು ನಂಜನಗೂಡಿಗೆ ತಂದು, ರಾತ್ರಿ ಹುಟ್ಟೂರಿಗೆ ತರಲಾಗುವುದು. ನಂಜನಗೂಡಿಂದ ಮೃತದೇಹವನ್ನು ಚಾಮರಾಜನಗರಕ್ಕೂ ತರಲಾಗುವುದು. ಆ ಬಳಿಕ ಅಲ್ಲಿಂದ ಹುಟ್ಟೂರು ಹೆಗ್ಗವಾಡಿಗೆ ತೆಗೆದುಕೊಂಡು ಹೋಗಲಾಗುವುದು. ಹೆಗ್ಗವಾಡಿಯಲ್ಲಿರುವ ಅವರ ಜಮೀನಿನಲ್ಲಿ, ತಂದೆ ತಾಯಿ ಸಮಾಧಿ ಪಕ್ಕದಲ್ಲಿ, ಅಂತ್ಯಸಂಸ್ಕಾರ ನಾಳೆ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ” ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
1961 ರಂದು ಜುಲೈ 31 ರಂದು ಜನಿಸಿದ್ದ ಧ್ರುವನಾರಾಯಣ ಅವರು ಹಳೇ ಮೈಸೂರು ಭಾಗದ ಪ್ರಬಲ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದರು. ಅವರ ಮೂಲ ಹೆಸರು ರಂಗಸ್ವಾಮಿ ಧ್ರುವನಾರಾಯಣ ಎಂದಾಗಿತ್ತಾದರೂ ಆರ್. ಧ್ರುವನಾರಾಯಣ ಎಂದೇ ಚಿರಪರಿಚಿತರಾಗಿದ್ದರು. ಸದ್ಯ ಮೈಸೂರಿನಲ್ಲಿರುವ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಗಿದ್ದು, ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಧ್ರುವನಾರಾಯಣ ಅವರು ಮೂರು ಬಾರಿ ವಿಧಾನಸಭೆಗೆ, ಮೂರು ಬಾರಿಲೋಕಸಭೆಗೆ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಗೆದ್ದಿದ್ದರೆ, ಇನ್ನೆರಡು ಬಾರಿ ಸೋಲುಂಡಿದ್ದರು.