ನವದೆಹಲಿ: “ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸುವಿಕೆಯಿಂದ ನಾನು ವಿಚಲಿತನಾಗಿಲ್ಲ. ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ಹೋರಾಟ ಮುಂದುವರಿಯಲಿದೆ. ನಾನು ಚಿಂತಾಕ್ರಾಂತನಾಗಿ ಕಾಣುತ್ತಿದ್ದೇನೆಯೇ? ಇಲ್ಲ, ನಾನು ಉತ್ಸುಕನಾಗಿದ್ದೇನೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಲೋಕಸಭೆ ಸದಸ್ಯತ್ವ ಅನರ್ಹಗೊಂಡ ಬಳಿಕ ಶನಿವಾರ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿ ನನ್ನ ಮುಂದಿನ ಭಾಷಣಕ್ಕೆ ಹೆದರಿದ್ದರಿಂದ ನನ್ನನ್ನು ಅನರ್ಹಗೊಳಿಸಲಾಗಿದೆ. ನಾನು ಅವರ ಕಣ್ಣುಗಳಲ್ಲಿ ಭಯವನ್ನು ಕಂಡಿದ್ದೇನೆ. ಅದಕ್ಕಾಗಿಯೇ ನಾನು ಸಂಸತ್ತಿನಲ್ಲಿ ಮಾತನಾಡುವುದನ್ನು ಅವರು ಬಯಸುವುದಿಲ್ಲ” ಎಂದು ಹೇಳಿದರು.
“ದೇಶದ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಲಾಗುತ್ತಿದೆ ಎಂಬುದಕ್ಕೆ ನಿತ್ಯವೂ ಸಾಕ್ಷಿಗಳು ಸಿಗುತ್ತಿವೆ. ತಮ್ಮನ್ನು ಪ್ರಶ್ನಿಸುವ ವಿಪಕ್ಷ ನಾಯಕರನ್ನು ಜೈಲಿಗೆ ತಳ್ಳಲು ಬಯಸಿರುವ ಪ್ರಧಾನಿ ಮೋದಿ, ಸರ್ವಾಧಿಕಾರಿಯಂತೆ ವಿಜೃಂಭಿಸುವ ಕನಸು ಕಾಣುತ್ತಿದ್ದಾರೆ. ಆದರೆ ಭಾರತದ ಜನತೆ ಪ್ರಧಾನಿ ಮೋದಿ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿತವಾಗಿಯೂ ತಿರಸ್ಕರಿಸಲಿದ್ದಾರೆ” ಎಂದು ಕಿಡಿಕಾರಿದರು.
“ಸರ್ಕಾರ ಜನರ ದಿಕ್ಕು ತಪ್ಪಿಸಲು ಈ ಆಟವನ್ನು ಆಡಿದೆ. ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸ್ನೇಹ ಸಂಬಂಧ ದೇಶದ ಸಂಪತ್ತಿನ ಲೂಟಿಗೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿದ ಕಾರಣಕ್ಕಾಗಿ ನನ್ನನ್ನು ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಆದರೆ ಇದರಿಂದ ನನ್ನ ಹೋರಾಟದ ನಿರ್ಧಾರ ಮತ್ತಷ್ಟು ಗಟ್ಟಿಗೊಂಡಿದ್ದು, ನಾನು ಪ್ರಧಾನಿ ಮೋದಿ ಅವರನ್ನು ನಿರಂತರವಾಗಿ ಪ್ರಶ್ನಿಸುತ್ತಲೇ ಇರುತ್ತೇನೆ. ನನ್ನನ್ನು ಅನರ್ಹಗೊಳಿಸಿರುವುದರಿಂದ ಅಥವಾ ಜೈಲಿಗೆ ಅಟ್ಟುವುದರಿಂದ ನಾನು ಹೆದರುವುದಿಲ್ಲ ಅಥವಾ ಹಿಂದಕ್ಕೆ ಸರಿಯುವುದಿಲ್ಲ. ನನಗೆ ಸತ್ಯದ ಹೊರತಾಗಿ ಬೇರೆ ಯಾವುದರಲ್ಲಿಯೂ ಆಸಕ್ತಿ ಇಲ್ಲ” ಎಂದು ತಿಳಿಸಿದರು.
“ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಾನು ಮಾಡಿದ ಭಾಷಣ ದೇಶ ವಿರೋಧಿ ಎಂಬುದು ಅಪ್ಪಟ ಸುಳ್ಳು. ನಾನು ದೇಶದ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿಯನ್ನು ಪ್ರಶ್ನಿಸಿದ್ದೇನೆ. ಇದನ್ನು ಮುಂದೆಯೂ ಪ್ರಶ್ನಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.
“ನಾನು ವಯನಾಡಿನ ಜನತೆಗೆ ಈ ವೇಳೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಅವರು ನನಗೆ ತೋರಿದ ಪ್ರೀತಿ, ಗೌರವವನ್ನು ನಾನು ಸದಾ ಸ್ಮರಿಸುತ್ತೇನೆ. ನಾನು ಈಗ ಅವರ ಪ್ರತಿನಿಧಿಯಲ್ಲವಾದರೂ, ಅವರೊಂದಿಗೆ ನಾನು ಸದಾ ಸಂಪರ್ಕದಲ್ಲಿರುತ್ತೇನೆ” ಎಂದು ರಾಹುಲ್ ಗಾಂಧಿ ಇದೇ ವೇಳೆ ನುಡಿದರು.
“ನನಗೆ ಒಂದೇ ಒಂದು ಹೆಜ್ಜೆ ಇದೆ ಮತ್ತು ಅದು ಸತ್ಯಕ್ಕಾಗಿ ಹೋರಾಡುವುದು ಮತ್ತು ಈ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ರಕ್ಷಿಸುವುದು. ನನ್ನನ್ನು ಜೀವನಪರ್ಯಂತ ಅನರ್ಹಗೊಳಿಸಿ, ಜೀವಾವಧಿಯವರೆಗೆ ಜೈಲಿನಲ್ಲಿರಿಸಿದರೂ, ನಾನು ಮುಂದುವರಿಯುತ್ತೇನೆ” ಎಂದು ಪುನರುಚ್ಚಿಸಿದರು.
ನಾನು ಸಾವರ್ಕರ್ ಅಲ್ಲ: “ನನ್ನ ಹೆಸರು ಸಾವರ್ಕರ್ ಅಲ್ಲ, ಗಾಂಧಿ. ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ “ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಬ್ರಿಟನ್ ಪ್ರವಾಸ ಕೈಗೊಂಡಿದ್ದ ರಾಹುಲ್ ಅವರು, ದೇಶದ ಪ್ರಜಾಪ್ರಭತ್ವ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ. ಇದನ್ನು ಉಲ್ಲೇ ಖಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಾಹುಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
“ವಿ.ಡಿ. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣ ಪತ್ರ ಸಲ್ಲಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದರು. ಅದೇ ರೀತಿ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೇ ದೇಶದ ಜನತೆಗೆ ದ್ರೋಹ ಬಗೆಯಿತು. ಆದರೆ ನಾನು ಈ ಇಬ್ಬರಂತೆ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅನ್ಯಾಯದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಪಕ್ಷದ ಸದಸ್ಯ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ” ಎಂದು ಅವರು ಗುಡುಗಿದರು.
“ದೇಶದ ಆಡಳಿತದಲ್ಲಿ ವಿದೇಶಗಳ ಮಧ್ಯಪ್ರವೇಶಕ್ಕೆ ನಾನು ಕರೆ ನೀಡಿದ್ದೇನೆ ಎಂದು ಮಂತ್ರಿಗಳು ಸುಳ್ಳು ಹೇಳಿದ್ದಾರೆ. ನಾನು ಅಂತಹ ಕೆಲಸ ಎಂದಿಗೂ ಮಾಡಿಲ್ಲ” ಸ್ಪಷ್ಟಪಡಿಸಿದರು.