ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮೂರು ಅವಧಿಗೆ ಸಂಸದರಾಗಿದ್ದ ನಳೀನ್ ಕುಮಾರ್ ಕಟೀಲ್ ಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ತಪ್ಪಿದೆ. ಈ ಕುರಿತು ವಾರಗಳ ಹಿಂದೆ ತುಳುನಾಡಿನ ದೈವವೊಂದು ನಳಿನ್ ಗೆ ಸೂಚನೆ ನೀಡಿತ್ತು ಎನ್ನಲಾಗಿದ್ದು, ಇದೀಗ ವೀಡಿಯೊ ವೈರಲ್ ಆಗಿದೆ.
ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಇತ್ತೀಚಿಗೆ ನಡೆದಿದ್ದ ವಯನಾಟ್ ಕುಲವನ್ ದೈವದ ನೇಮೋತ್ಸವದಲ್ಲಿ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು. ಈ ವೇಳೆ ವಿಷ್ಣುಮೂರ್ತಿ ದೈವ, “ನಿನಗೆ ವೈರಿಗಳು ತುಂಬಾನೇ ಇದ್ದಾರೆ, ದಯಾದಿಗಳೇ ಪರಸ್ಪರ ವೈರಿಗಳಾಗಿ ಕುರುಕ್ಷೇತ್ರ ಯುದ್ಧ ನಡೆಯಲಿಲ್ಲವೇ. ಅಂದು ಪಾರ್ಥನಿಗೂ ಧರ್ಮ ಕಾಪಾಡುವಂತೆ ನಾನು ಸಲಹೆ ನೀಡಿದ್ದೆ. ವೈರಿಗಳು ಎಷ್ಟಿದ್ದರೇನು ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು. ಯಾವುದಕ್ಕೂ ಕುಗ್ಗಬೇಡ ಎಂದಿರುವ ದೈವ, ನೀನು ಹಿಂದುರುಗಿ ನೋಡಬೇಡ, ನಿನಗೆ ಮುಂದೊಂದು ದಿನ ಜಯವಿದೆ” ಎಂದು ಸಂಸದ ನಳಿನ್ ಗೆ ಅಭಯ ನೀಡಿತ್ತು.
ಅಸಲಿ ಕಾರಣ: ನಳಿನ್ ಗೆ ಟಿಕೆಟ್ ನೀಡಬಾರದಾಗಿ ಪಕ್ಷದೊಳಗೆ ಸಾಕಷ್ಟು ಕೂಗೆದ್ದಿತ್ತು. 2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ನಡೆದ ಯುವ ಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ನಳಿನ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದ್ದರು. ನಳಿನ್ ವಿರುದ್ಧ ಪಕ್ಷದ ಹೈಕಮಾಂಡ್ ಗೆ ದೂರು ಹೋಗಿತ್ತು. ಪುತ್ತೂರು ಕ್ಷೇತ್ರದ ಟಿಕೆಟ್ ಹಂಚಿಕೆ ಆದ ಬಳಿಕ ಇದು ತಾರಕ್ಕೇರಿತ್ತು.
ಪಕ್ಷದಲ್ಲಿ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ತಪ್ಪಿದಾಗ ನಳೀನ್ ವಿರುದ್ಧ ಹಿಂದೂ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದರು. ಪುತ್ತಿಲ ಸ್ಪರ್ಧೆಯಿಂದ ಬಿಜೆಪಿ ಭದ್ರಕೋಟೆ ಪುತ್ತೂರಿನಲ್ಲಿ ಪಕ್ಷ ಮೂರನೇ ಸ್ಥಾನಕ್ಕಿಳಿಯುವಂತೆಯಾಯಿತು. ನಳಿನ್ ಗೆ ಲೋಕಸಭೆಯಲ್ಲಿ ಟಿಕೆಟ್ ನೀಡಿದ್ದರೆ ಪುತ್ತಿಲ ಪರಿವಾರ ಬಂಡಾಯ ನಿಲ್ಲಲು ಸಿದ್ಧತೆ ನಡೆಸಿತ್ತು. ಇನ್ನೊಂದೆಡೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಸ್ಪರ್ಧೆಗೆ ಸುಳಿವು ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ಅರಿತ ಬಿಜೆಪಿ ವರಿಷ್ಠರು ನಳಿನ್ ಬದಲಿಗೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಒಟ್ಟಿನಲ್ಲಿ ಕಾರ್ಯಕರ್ತರ ವಿರೋಧವೇ ನಳಿನ್ ಗೆ ಟಿಕೆಟ್ ಕೈ ತಪ್ಪಲು ಮೂಲ ಕಾರಣ ಎಂದು ವಿಶ್ಲೇಷಿಸಲಾಗಿದೆ.