ಮಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನದ ಹಿನ್ನೆಲೆಯಲ್ಲಿ ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಸ್ನೇಹಜೀವಿಯಾಗಿದ್ದ ಧ್ರುವನಾರಾಯಣ ಅವರು ರಾಜಕಾರಣದಲ್ಲಿ ಅಜಾತಶತ್ರು ಆಗಿದ್ದರು. ಅವರ ಅಗಲಿಕೆ ನೋವನ್ನುಂಟು ಮಾಡಿದ್ದು, ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಎನ್.ಎಸ್.ಯು.ಐ ಮೂಲಕ ಸೇರಿ ಕಾಂಗ್ರೆಸ್ ಪಕ್ಷದ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡರು. 2 ಬಾರಿ ಶಾಸಕ, 2 ಬಾರಿ ಸಂಸದರಾಗಿ ಮೈಸೂರು ಭಾಗದ ಪ್ರಭಾವಿ ರಾಜಕಾರಣಿಯಾಗಿ ಬೆಳೆದಿದ್ದರು. ಎಲ್ಲರ ಪ್ರೀತಿ ಪಾತ್ರರಾಗಿದ್ದ ಅವರ ತತ್ವಾದರ್ಶಗಳು ಯುವ ಕಾರ್ಯಕರ್ತರಿಗೆ ಪ್ರೇರಣೆಯಾಗಲಿ. ಅವರ ಆತ್ಮಕ್ಕೆ ಚಿರ ಶಾಂತಿ ಲಭಿಸಲಿ, ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ದೇವರು ಕರುಣಿಸಲಿ ಎಂದು ಸಂತಾಪ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ನಾನು ಮತ್ತು ಧ್ರುವನಾರಾಯಣ ಅವರು 40 ವರ್ಷಗಳಿಂದ ಸ್ನೇಹಿತರಾಗಿದ್ದೆವು. ಅವರಿಗೆ ಮಂಗಳೂರಿನ ನುಂಟು ಇತ್ತು. ಮಂಗಳೂರಿಗೆ ಬಂದಾಗ ಪ್ರತಿ ಸಲ ಭೇಟಿಯಾಗುತ್ತಿದ್ದರು. ಆದರೆ ಇತ್ತೀಚಿಗೆ ಮಂಗಳೂರಿಗೆ ಬಂದ ಸಂದರ್ಭದಲ್ಲಿ “ಇದು ನನ್ನ ಕೊನೆ ಬಾರಿ ಮಂಗಳೂರು ಭೇಟಿ, ನಾನಿನ್ನು ಬರುವುದಿಲ್ಲ. ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಹಾಗಾಗಿ ಉಡುಪಿಯ ಉಸ್ತುವಾರಿಯಾಗಿ ನೋಡಿಕೊಳ್ಳಬೇಕು” ಎಂದಿದ್ದರು. ಬಡವರ, ದೀನದಲಿತರ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿದ್ದರು ಎಂದು ನೆನಪಿಸಿ ಕಂಬನಿ ಮಿಡಿದರು.
ಈ ಸಂದರ್ಭ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜಾ ಮಾತನಾಡಿ ಸಂತಾಪ ಸೂಚಿಸಿದರು. ಕೋಡಿಜಾಲ್ ಇಬ್ರಾಹೀಂ, ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ವಿಶ್ವಾಸ್ ಕುಮಾರ್ ದಾಸ್, ಸಂತೋಷ್ ಕುಮಾರ್ ಶೆಟ್ಟಿ, ಶಾಲೆಟ್ ಪಿಂಟೊ, ಲಾವಣ್ಯ ಬಳ್ಳಾಲ್, ಲಾರೆನ್ಸ್ ಡಿಸೋಜಾ, ಪ್ರಕಾಶ್ ಸಾಲ್ಯಾನ್, ಸವಾದ್ ಸುಳ್ಯ, ಜಿಲ್ಲಾ ಪದಾಧಿಕಾರಿಗಳು ಹಾಗೂ ಮ.ನ.ಪಾ ಸದಸ್ಯರು ಉಪಸ್ಥಿತರಿದ್ದರು.