ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ಜೀವನದಲ್ಲಿ ಶ್ರೀ ಮಂಜುನಾಥ, ಈಶ್ವರ, ಗಂಗಾಧರ ಅಜ್ಜ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಈ ಯುದ್ಧ ಆರಂಭಿಸುವ ಮುನ್ನ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ದರ್ಶನ ಮಾಡಿ ಆಶೀರ್ವಾದ ಪಡೆದು ಹೋಗುವ ಪದ್ಧತಿ, ಪರಂಪರೆ ಇಟ್ಟುಕೊಂಡಿದ್ದೇನೆ. ನಾವು ಪಂಚ ಗ್ಯಾರೆಂಟಿಗಳನ್ನು ಕೊಟ್ಟ ಮಾತಿನಂತೆ ಉಳಿಸಿಕೊಂಡಿದ್ದೇವೆ.ಇನ್ನು ಹೆಚ್ಚಿಗೆ ಶಕ್ತಿ ಕೊಡಿ ಅಂತ ಹೇಳಿ ಭಗವಂತನಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದೇನೆ. ನುಡಿದಂತೆ ನಡೆಯಲು ಆ ದೇವರು ಶಕ್ತಿ ಕೊಟ್ಟಿದ್ದಾನೆ ಇದು ನಮ್ಮ ಭಾಗ್ಯ. ಶ್ರೀ ಮಂಜುನಾಥಸ್ವಾಮಿಯ ಅನುಗ್ರಹ ಪಡೆದು ಚುನಾವಣಾ ಯುದ್ಧಕ್ಕೆ ಹೊರಟಿದ್ದೇವೆ. ಜನ ಆಶೀರ್ವಾದ ಮಾಡುವ ನಂಬಿಕೆಯಿದೆ” ಎಂದರು.
ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ, ನಾಗೇಶ್ ಕುಮಾರ್, ರಂಜನ್. ಜಿ ಗೌಡ, ಅಭಿನಂದನ್ ಹರೀಶ್, ಭರತ್, ಅಭಿದೇವ್ ಮತ್ತಿತರರಿದ್ದರು.