Monday, December 23, 2024

ದ.ಕ. ಲೋಕಸಭಾ ಕ್ಷೇತ್ರ| ಸರ್ವ ಧರ್ಮದ ಸಮನ್ವಯಕಾರ ಪದ್ಮರಾಜ್ ಪೂಜಾರಿ

by eesamachara
0 comment

ಯುವ ಜನರ ನಡುವೆ ನಾಯಕನಾಗಿ, ಉತ್ಸಾಹದಿಂದ ಪುಟಿಯುವ ಯುವತ್ವದ ಪ್ರತಿನಿಧಿಯಾಗಿ ಕಾಣುವ ಅಪರೂಪದ ವ್ಯಕ್ತಿತ್ವ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರದು. ತಮ್ಮ ಸಮುದಾಯ ಮತ್ತು ಧರ್ಮದ ಮೇಲೆ ಪ್ರೀತಿ-ಗೌರವ ಇರಿಸಿಕೊಂಡೇ ಇತರ ಎಲ್ಲ ಧರ್ಮ ಮತ್ತು ಸಮುದಾಯದವರನ್ನು ಸ್ನೇಹದಿಂದ ಅಪ್ಪಿಕೊಳ್ಳುವ ಜಾಯಮಾನದ ವ್ಯಕ್ತಿ ಅವರು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ಉಳಿಯಬೇಕು ಎಂಬ ಧ್ಯೇಯ ಮಂತ್ರವನ್ನು ಸದಾ ಪಠಿಸುತ್ತಿರುವ ಅವರು ಅಭಿವೃದ್ಧಿಯ ಕುರಿತು ತಮ್ಮದೇ ಆದ ದೃಷ್ಟಿಕೋನ ಇರಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಹಸಿರು ನಿಶಾನೆ ಸಿಕ್ಕಿದಾಗಿನಿಂದ ಪದ್ಮರಾಜ್ ಅವರು ವಿಶ್ರಾಂತಿ ಎಂಬ ಪದವನ್ನೇ ಮರೆತಿದ್ದಾರೆ. ಮಾರ್ಚ್ 22ರಂದು ಮಂಗಳೂರಿಗೆ ಮರಳಿದ ನಂತರ ಜಿಲ್ಲೆಯ ಮೂಲೆಮೂಲೆಗೆ ಓಡಾಡುತ್ತಿರುವ ಅವರು ಗೆಲುವು ಸಾಧಿಸಿ ಪಕ್ಷ ತಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಪ್ರತಿಯಾಗಿ ಸಿಹಿ ಫಲಿತಾಂಶ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಹೋದಲ್ಲೆಲ್ಲ ಸಿಗುತ್ತಿರುವ ಅಪಾರ ಬೆಂಬಲವು ಅವರನ್ನು ಖುಷಿಯ ಅಲೆಯಲ್ಲಿ ತೇಲಿಸುತ್ತಿದೆ.

ಸದಾ ನಗುನಗುತ್ತಲೇ ಇರುವುದು ಪದ್ಮರಾಜ್ ಅವರ ವ್ಯಕ್ತಿತ್ವದ ಪ್ರಮುಖ ಅಂಶ. ಎಂಥದೇ ಪರಿಸ್ಥಿತಿ ಬರಲಿ, ಕೋಪ ಮತ್ತು ಬೇಸರ ಮಾಡಿಕೊಳ್ಳುವುದು ಅವರ ಜಾಯಮಾನವಲ್ಲ. ಪ್ರಚಾರದ ಸಂದರ್ಭದಲ್ಲಿ ಎಲ್ಲರ ಬಳಿಗೆ ಹೋಗಿ ವೈಯಕ್ತಿಕ ನೆಲೆಯಲ್ಲಿ ಮಾತನಾಡುವ ಪರಿ ವಿಶಿಷ್ಟ. ಪ್ರತಿ ಮಾತಿನಲ್ಲೂ ಧಾರ್ಮಿಕ ಸೌಹಾರ್ದ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಮತ್ತು ಆದರ್ಶದ ಬಗ್ಗೆ ಪ್ರಸ್ತಾಪಿಸುವ ಅವರು ಸಮಾಜದ ಕುರಿತು ನೈಜ ಕಾಳಜಿಯುಳ್ಳ ವ್ಯಕ್ತಿ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್ ಅವರಿಗೆ ಆರಂಭದಲ್ಲಿ ಸಲಹೆಗಳನ್ನು ನೀಡಿದವರು ಹಿರಿಯ ವಕೀಲ ಪಿ.ಗಂಗಾಧರ್. ನೇರ ನಡೆ- ನುಡಿಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಗರಡಿಗೆ ತಲುಪಿದ ಮೇಲೆ ಅವರು ಹೆಚ್ಚು ಪ್ರಬುದ್ಧರಾದರು.

ಕುದ್ರೋಳಿ ದೇವಸ್ಥಾನದಲ್ಲಿ ಚಟುವಟಿಕೆ: ಯುವ ವಯಸ್ಸಿನಲ್ಲೇ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಗೆ ಸೇರ್ಪಡೆಯಾಗಿ ಜನಮೆಚ್ಚುಗೆ ಗಳಿಸಿದ ಪದ್ಮರಾಜ್ ಅವರು 28 ವರ್ಷಗಳಿಂದ ಕ್ಷೇತ್ರದ ಕೋಶಾಧಿಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ನವರಾತ್ರಿ ಉತ್ಸವ ಹೊಸ ಕಳೆ ಪಡೆದುಕೊಂಡದ್ದರಲ್ಲಿ ಅವರ ಶ್ರಮವೂ ಪ್ರಮುಖವಾಗಿದೆ. ನಾರಾಯಣ ಗುರುಗಳಿಗೆ ಅವಮಾನ ಆದಾಗಲೆಲ್ಲ ಪದ್ಮರಾಜ್ ಅವರು ಮುಂಚೂಣಿಯಲ್ಲಿ ನಿಂತು ಹೋರಾಡಿದ್ದಾರೆ. ಯುವಕರು ವಿದ್ಯಾವಂತರಾಗಬೇಕು, ದುಶ್ಚಟಗಳಿಗೆ ಬಲಿಯಾಗಬಾರದು ಎಂಬ ಕಾಳಜಿ ಹೊಂದಿರುವ ಪದ್ಮರಾಜ್ ಕಲಹಗಳನ್ನು ಬಗೆಹರಿಸುವುದರಲ್ಲೂ ನಿಸ್ಸೀಮರು.

ಬೆಳಕಾದ ಗುರುಬೆಳದಿಂಗಳು ಫೌಂಡೇಷನ್ ಬಡವರ ಬಾಳಿಗೆ ಬೆಳಕಾಗಿರುವ ಗುರು ಬೆಳದಿಂಗಳು ಫೌಂಡೇಷನ್ ಮೂಲಕ ಪದ್ಮರಾಜ್ ಅವರು ಅನೇಕ ಸೇವಾಕಾರ್ಯಗಳನ್ನು ಮಾಡಿದ್ದಾರೆ. ಕೋವಿಡ್ ಲಾಕ್‌ ಡೌನ್ ಸಂದರ್ಭದಲ್ಲಿ ಬಡವರ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಬಡವರು, ನಿರಾಶ್ರಿತರು ಹಾಗೂ ವಲಸೆ ಕೂಲಿಕಾರ್ಮಿಕರಿಗೆ ಅನ್ನದಾನ ನಡೆದಾಗಿ ಅವರೇ ಮುಂದೆ ನಿಂತು ಓಡಾಡುತ್ತಿದ್ದರು. ಎರಡನೇ ಲಾಕ್‌ಡೌನ್ ಸಂದರ್ಭದಲ್ಲಿ ಗುರುಬೆಳದಿಂಗಳು ಫೌಂಡೇಷನ್ ಮೂಲಕ ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರ ಮನ ನವೀಕರಣ ಮಾಡಿದ ಅವರು ಹಲವಾರು ಕುಟುಂಬಗಳಿಗೆ ಜಾತಿ-ಮತ ತಾರತಮ್ಯ ಇಲ್ಲದೆ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿದ್ದಾರೆ. ಆರೋಗ್ಯ, ಆಸರೆ, ಶಿಕ್ಷಣ ಎಂಬ ಧ್ಯೇಯದ ಗುರುಬೆಳದಿಂಗಳು ಫೌಂಡೇಷನ್ ಮೂಲಕ ಅನೇಕರಿಗೆ ಆಸರೆಯಾಗಿದ್ದಾರೆ. ಶೈಕ್ಷಣಿಕ ನಿಧಿ, ಆರೋಗ್ಯ ನಿಧಿ, ಆಸರೆ ನಿಧಿಯನ್ನು ಒಳಗೊಂಡಿರುವ ಗುರು ಬೆಳದಿಂಗಳು ಫೌಂಡೇಷನ್ ಹೆಣ್ಣುಮಕ್ಕಳ ಮದುವೆಗೂ ಸಹಾಯಹಸ್ತ ಚಾಚಿದೆ. ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧೈಯದೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಬಿಲ್ಲವ ಸಮಾಜದ ಬಲಿಷ್ಠ ಯುವ ಸಂಘಟನೆ ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರೂ ಆಗಿದ್ದಾರೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios