ಮಂಗಳೂರು: ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ರೈತ ಕಾರ್ಮಿಕರ, ಜನಸಾಮಾನ್ಯರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಗೂ ಮೂರೂವರೆ ದಶಕಗಳ ಬಿಜೆಪಿ ದುರಾಡಳಿತದ ವಿರುದ್ಧ ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ನಾಳೆ (19.12.2023) ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ ಹಾಗೂ ಬಹಿರಂಗ ಸಭೆಯನ್ನು ಆಯೋಜಿಸಿದೆ.
ಬೆಳಿಗ್ಗೆ 10ಕ್ಕೆ ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಮೆರವಣಿಗೆ ಹೊರಟು ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಬಹಿರಂಗ ಸಭೆ ನಡೆಯಲಿದೆ.
ಬೇಡಿಕೆಗಳು: ಸಿಟಿ ಬಸ್ಸುಗಳ ಸಹಿತ ಜಿಲ್ಲೆಯ ಎಲ್ಲಾ ಮಾರ್ಗಗಳಲ್ಲಿ ಸರಕಾರಿ ಬಸ್ಸು ಓಡಿಸಲು ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು, ಬೀದಿ ಬದಿ ವ್ಯಾಪಾರಸ್ಥರಿಗೆ ತಕ್ಷಣವೇ ಗುರುತು ಪತ್ರ ವಿತರಿಸುವುದು ಮತ್ತು ಬೀದಿ ಬದಿ ವ್ಯಾಪಾರಕ್ಕೆ ಅನುಕೂಲಕರ ಸ್ಥಳ ಗುರುತಿಸುವುದು, ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮಗಳ ಕುರಿತು ತನಿಖೆ ನಡೆಸುವುದು, ಮಂಗಳೂರು ನಗರ ಪಾಲಿಕೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಜಿಲ್ಲೆಯಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಸ್ಥಾಪಿಸುವುದು, ಜಿಲ್ಲೆಯಲ್ಲಿರುವ ಮೆಡಿಕಲ್, ಪಾರಾ ಮೆಡಿಕಲ್, ಇಂಜಿನಿಯರಿಂಗ್, ವೃತ್ತಿಪರ, ಪದವಿ ಸಹಿತ ಖಾಸಾಗಿ, ದುಬಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಸೀಟುಗಳನ್ನು ಕಾದಿರಿಸುವುದು, ದುಬಾರಿ ಖಾಸಾಗಿ ಶಾಲೆಗಳ ಏಕಸ್ವಾಮ್ಯದಿಂದ ಉಂಟಾಗಿರುವ ಶೈಕ್ಷಣಿಕ ಬಿಕ್ಕಟ್ಟು ಪರಿಹರಿಸುವುದು, ಕಡಿಮೆ ಆದಾಯದ ಕುಟುಂಬದ ವಿದ್ಯಾರ್ಥಿಗಳಿಗೆ ದುಬಾರಿಯಾಗದಂತೆ ಶಿಕ್ಷಣ ಪಡೆಯಲು ನಿಯಮ ರೂಪಿಸುವುದು, ಸುಂಕ ಸಂಗ್ರಹ ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್ ನ ಅಪಾಯಕಾರಿ ಅವಶೇಷಗಳನ್ನು ತಕ್ಷಣ ತೆರವುಗೊಳಿಸಬೇಕು, ಮೀನುಗಾರಿಕೆ, ಅಡಿಕೆ, ರಬ್ಬರ್ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸುವುದು, ಇವುಗಳ ಉತ್ಪನ್ನ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸುವುದು, ಸರಕಾರದ ನಿಯಮದಂತೆ ಜನಸಂಖ್ಯಾಧಾರಿತವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳನ್ನು ನಿರ್ಮಿಸಬೇಕು, ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕು ಆಸ್ಪತ್ರೆಗಳಿಗೆ ವೈದ್ಯರು, ಸಿಬ್ಬಂದಿಗಳ ಸಹಿತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಕಿದ್ವಾಯಿ ಜಯದೇವದಂತಹ ಕ್ಯಾನ್ಸರ್, ಹೃದಯ ಚಿಕಿತ್ಸೆಯ ಘಟಕಗಳನ್ನು ಸರಕಾರದ ವತಿಯಿಂದ ಆರಂಭಿಸಬೇಕು, ಮನೆ, ನಿವೇಶನ ರಹಿತರ ಬೇಡಿಕೆ ಈಡೇರಿಸಲು ಜಿಲ್ಲಾಮಟ್ಟದ ಕಾರ್ಯಯೋಜನೆ ರೂಪಿಸುವುದು, ಮನೆ ಬಾಡಿಗೆ ನಿಯಂತ್ರಣ ಕಾಯ್ದೆ ಜಾರಿಗೆ ತರುವುದು, ದ.ಕ. ಜಿಲ್ಲೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸುವುದು, ಟೋಲ್ ಗೇಟ್ ಅಳವಡಿಕೆ, ಟೋಲ್ ದರ ನಿಗದಿಯನ್ನು ಜನರಿಗೆ ಹೊರೆಯಾಗದಂತೆ ನಿರ್ಧರಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆ ಮುಂದಿಡಲಾಗಿದೆ. CPI(M) Communist Party of India