ದಾವಣಗೆರೆ: ಮಧ್ಯಾಹ್ನದ ಬಿಸಿ ಊಟ ಸೇವಿಸಿ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಸೋಮವಾರ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ಕಾಕನೂರಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ((Davanagere)
ವಸತಿ ಶಾಲೆಯಲ್ಲಿ ಮಧ್ಯಾಹ್ನ ಊಟ ಮಾಡುತ್ತಿದ್ದಂತೆ 25ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ ಭೇದಿ ಶುರುವಾಗಿದೆ. ತಕ್ಷಣವೇ ಅಸ್ವಸ್ಥ ಮಕ್ಕಳಿಗೆ ಸಂತೆಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಭೀರ ಅಸ್ವಸ್ಥಗೊಂಡಿರುವ ಐವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಘಟನೆಯ ಸುದ್ದಿ ತಿಳಿದ ಶಾಸಕ ಬಸವರಾಜು ವಿ.ಶಿವಗಂಗ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಕ್ಕಳ ಅನಾರೋಗ್ಯಕ್ಕೆ ಕಾರಣರಾದ ವಸತಿ ನಿಲಯದ ವಾರ್ಡನ್ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡುವಂತೆ ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿ ಕಠಿಣ ಕ್ರಮ ವಹಿಸಲು ಸೂಚಿಸಿದ್ದಾರೆ.