ಮಂಗಳೂರು: ವ್ಯವಹಾರದ ನಿಮಿತ್ತ ತುಮಕೂರಿಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು ಸುಟ್ಟು ಕೊಂದು ಕೊಲೆ ಮಾಡಿದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಗ್ರಹಿಸಿದ್ದಾರೆ.
“ಮಾ.21ರಂದು ರಾತ್ರಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಯುವಕರಾದ ಇಸಾಕ್, ಶಾಹುಲ್ ಹಮೀದ್, ಸಿದ್ದೀಕ್ ಎಂಬವರು ವ್ಯವಹಾರ ನಿಮಿತ್ತ ತುಮಕೂರಿಗೆ ತೆರಳಿದ ಸಂದರ್ಭ ಕೊಲೆಯಾಗಿದ್ದಾರೆ. ಮೂವರು ಯುವಕರು ತಮ್ಮ ಕುಟುಂಬದ ನಿರ್ವಹಣೆಗೆ ದುಡಿಯುತ್ತಿದ್ದವರು. ಅವರನ್ನು ಮೋಸದಿಂದ ಕೊಲೆ ಮಾಡಲಾಗಿದ್ದು, ಇದರಿಂದ ಅವರ ಕುಟುಂಬಗಳು ಕಂಗಾಲಾಗಿವೆ. ಸರಕಾರ ಸಿಐಡಿ ತನಿಖೆ ನಡೆಸಬೇಕು ಹಾಗೂ ಕೊಲೆಯ ಹಿಂದಿರುವ ಜಾಲವನ್ನು ಬೇಧಿಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕು” ಎಂದು ಹರೀಶ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.